ಕಿವೀಸ್‍ನ ಹಿರಿಯ ಕ್ರಿಕೆಟಿಗ ವೆಟೋರಿ ವಿದಾಯ

ನ್ಯೂಜಿಲೆಂಡ್ ತಂಡದ ಹಿರಿಯ ಅಟಗಾರ, ಸ್ಪಿನ್ನರ್ ಡೇನಿಯಲ್ ವೆಟೋರಿ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ...
ಡೇನಿಯಲ್ ವೆಟ್ಟೋರಿ (ಸಂಗ್ರಹ ಚಿತ್ರ)
ಡೇನಿಯಲ್ ವೆಟ್ಟೋರಿ (ಸಂಗ್ರಹ ಚಿತ್ರ)

ಆಕ್ಲೆಂಡ್: ನ್ಯೂಜಿಲೆಂಡ್ ತಂಡದ ಹಿರಿಯ ಅಟಗಾರ, ಸ್ಪಿನ್ನರ್ ಡೇನಿಯಲ್ ವೆಟೋರಿ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ.

ಮೆಲ್ಬರ್ನ್‍ನಲ್ಲಿ ಕಳೆದ ಭಾನುವಾರ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತರಾದ ನ್ಯೂಜಿಲೆಂಡ್ ಆಟಗಾರರು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಈ ಸಂದರ್ಭದಲ್ಲಿ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಟೋರಿ, 18 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದರು. ಇದರೊಂದಿಗೆ ವಿಶ್ವಕಪ್ ಬಳಿಕ ನಿವೃತ್ತಿಯಾದ ಕೆಲ ದಿಗ್ಗಜರೊಂದಿಗೆ ವೆಟೋರಿ ಕೂಡ ಗುರುತಿಸಿಕೊಂಡರು.

ಈಗಾಗಲೇ ಆಸ್ಟ್ರೇಲಿಯಾ ನಾಯಕ, ಮೈಕೆಲ್ ಕ್ಲಾರ್ಕ್, ಶ್ರೀಲಂಕಾದ ಭಲೇ ಜೋಡಿ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ದನೆ, ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಹಾಗೂ ಪಾಕಿಸ್ತಾನದ ಮಿಸ್ಬಾ-ಉಲ್-ಹಕ್ ಮತ್ತು ಶಾಹಿದ್ ಅಫ್ರಿದಿ ಅವರು ವಿಶ್ವಕಪ್ ಬಳಿಕ ವಿದಾಯ ಹೇಳಿ ಹೊರನಡೆದಿದ್ದಾರೆ. ನ್ಯೂಜಿಲೆಂಡ್ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿರುವ 36ರ ವೆಟೋರಿ, ತಂಡದಲ್ಲಿನ ಸಾಕಷ್ಟು ಅನುಭವವುಳ್ಳ ಆಟಗಾರರಾಗಿದ್ದರು. ತಮ್ಮ ಅತ್ಯುತ್ತಮ ಸ್ಪಿನ್ ಬೌಲಿಂಗ್ ಮೂಲಕ ಜಾಗತಿಕ ಕ್ರಿಕೆಟ್‍ನ ದಿಗ್ಗಜ ಬ್ಯಾಟ್ಸ್‍ಮನ್‍ಗಳ ಪಾಲಿಗೆ ಹೆಚ್ಚು ಅಪಾಯಕಾರಿಯಾಗಿದ್ದರು.

ಸ್ಪಿನ್ ಜಾದೂ ಮೂಲಕ ನ್ಯೂಜಿಲೆಂಡ್‍ಗೆ ಅನೇಕ ಪಂದ್ಯಗಳಲ್ಲಿ ಗೆಲವು ತಂದುಕೊಟ್ಟಿದ್ದಾರೆ. ಅಲ್ಲದೆ, ಆಪತ್ಕಾಲದಲ್ಲಿ ಬ್ಯಾಟಿಂಗ್‍ನಲ್ಲಿ ಸಹ ಸೈ ಎನಿಸುವ ಮೂಲಕ ಹಲವಾರು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಜಯದಲ್ಲಿ ಮಿಂಚಿದ ಉದಾಹರಣೆಗಳಿವೆ. ವೆಲ್ಲಿಂಗ್ಟನ್‍ನಲ್ಲಿ 1997ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ರಂಗ ಪ್ರವೇಶಿಸಿದ್ದ ವೆಟೋರಿ, ಅದೇ ವರ್ಷ ಮಾರ್ಚ್ ತಿಂಗಳು ಕ್ರೈಸ್ಟ್ ಚರ್ಚ್‍ನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದ ಮೂಲಕ ಏಕದಿನ ಟೂರ್ನಿಗೂ ಪದಾರ್ಪಣೆ ಮಾಡಿದ್ದರು.

ಪಾಕಿಸ್ತಾನದ ಶಾರ್ಜಾದಲ್ಲಿ 2014ರ ನವೆಂಬರ್‍ನಲ್ಲಿ ಪಂದ್ಯ ವೆಟೋರಿ ಪಾಲಿಗೆ ಕೊನೆಯ ಟೆಸ್ಟ್ ಆಗಿದೆ. ತಮಗೆ ಈವರೆಗೆ ಬೆಂಬಲವಾಗಿ ನಿಂತಿದ್ದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ, ಆಯ್ಕೆದಾರರು, ಮಾಜಿ ಆಟಗಾರರು ಹಾಗೂ ಪ್ರತಿಪಂದ್ಯದಲ್ಲೂ ತಮಗೆ ಸ್ಫೂರ್ತಿ ತುಂಬುತ್ತಾ ಬಂದ ಸಹ ಆಟಗಾರರಿಗೆ ವೆಟೋರಿ ಅವರು ಅಭಿನಂದನೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com