ಮುಂಬೈಗೆ ಡೆವಿಲ್ಸ್ ಭಯ

ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪಡೆಗೆ ಆಘಾತ ನೀಡಿ ಸತತ ಮೂರನೇ ಗೆಲವಿನೊಂದಿಗೆ ಮುಂಬೈ ಇಂಡಿಯನ್ಸ್ ಆತ್ಮವಿಶ್ವಾಸದಿಂದ ಪುಟಿಯುತ್ತಿದ್ದರೂ..
ಡೆಲ್ಲಿ ವರ್ಸಸ್ ಮುಂಬೈ
ಡೆಲ್ಲಿ ವರ್ಸಸ್ ಮುಂಬೈ

ಮುಂಬೈ: ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪಡೆಗೆ ಆಘಾತ ನೀಡಿ ಸತತ ಮೂರನೇ ಗೆಲವಿನೊಂದಿಗೆ ಮುಂಬೈ ಇಂಡಿಯನ್ಸ್ ಆತ್ಮವಿಶ್ವಾಸದಿಂದ ಪುಟಿಯುತ್ತಿದ್ದರೂ ಸಹ ಸದ್ಯ 8ನೇ ಆವೃತ್ತಿಯ ಐಪಿಎಲ್‍ನಲ್ಲಿ ಅದರ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ.

ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಇನ್ನೂ 5 ಪಂದ್ಯಗಳನ್ನಾಡಬೇಕಿದ್ದು, ಅದರ ಪಾಲಿಗೆ ಪ್ರತಿ ಪಂದ್ಯವೂ ಮುಳ್ಳಿನ ಹಾದಿ ಇದ್ದಂತೆ. ಏಕೆಂದರೆ, ಒಂದು ಪಂದ್ಯ ಸೋತರೂ ಸಹ ಅಪಾಯದ ಅಂಚಿನಲ್ಲಿ ನಿಲ್ಲಬೇಕಾಗುತ್ತದೆ. ಅದೇ ರೀತಿ, ಈ ಸಲ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಡೇರ್‍ಡೆವಿಲ್ಸ್ ಸ್ಥಿತಿ ಕೂಡ ಮುಂಬೈ ಇಂಡಿಯನ್ಸ್‍ಗಿಂತ ಬಿsನ್ನವಾಗಿಲ್ಲ. ಡೆಲ್ಲಿ ಮತ್ತು ಮುಂಬೈ ಪಡೆಗಳು ತಲಾ 9 ಪಂದ್ಯಗಳನ್ನಾಡಿದ್ದು, ತಲಾ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸಮಗೌರವ ಹೊಂದಿವೆ. ಕೊಂಚ ಉತ್ತಮ ರನ್ ಸರಾಸರಿ ಹೊಂದಿರುವ ಕಾರಣಕ್ಕೆ ಡೆಲ್ಲಿ ಡೇರ್‍ಡೆವಿಲ್ಸ್ ಆಟಗಾರರು ಮುಂಬೈ ಇಂಡಿಯನ್ಸ್ ಗಿಂತ ಒಂದು ಸ್ಥಾನ ಮೇಲಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್‍ಡೆವಿಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಯಾರೇ ಸೋತರೂ, ಅವರಿಗೆ ಪ್ಲೇ-ಆಫ್ ಸುತ್ತಿನ ಹಾದಿ ಬಹುತೇಕ ಮುಚ್ಚಲಿದೆ. ಹಾಗಾಗಿ, ಹೇಗಾದರೂ ಮಾಡಿ ತಮ್ಮ ಉಳಿದೆಲ್ಲ ಲೀಗ್ ಪಂದ್ಯಗಳಲ್ಲಿ ಭರ್ಜರಿ ಗೆಲವು ದಾಖಲಿಸಿ ಮುಂದಿನ ಸುತ್ತಿನ ಪ್ರವೇಶವನ್ನು ಜೀವಂತವಾಗಿರಿಸಿಕೊಳ್ಳುವ ಉದ್ದೇಶದಿಂದ ಉಭಯ ಆಟಗಾರರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಈಗಾಗಲೇ ತವರು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಮೊದಲ ಸುತ್ತಿನ ಸೆಣಸಿನಲ್ಲಿ ಡೆಲ್ಲಿ ಆಟಗಾರರು, ಮುಂಬೈಗೆ 37 ರನ್‍ಗಳ ಆಘಾತ ನೀಡಿದ್ದಾರೆ. ಈ ಫಲಿತಾಂಶ ಡೆಲ್ಲಿ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಆದರೆ, ನಾಯಕ ಡುಮಿನಿ ಹಾಗೂ ಶ್ರೇಯಸ್ ಅಯ್ಯರ್ ಹೊರತಾಗಿ ಇತರೆ ಆಟಗಾರರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

ಮುಖ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಮತ್ತು ಏಂಜೆಲೊ ಮ್ಯಾಥ್ಯೂಸ್‍ರ ದಯನೀಯ ವೈಫಲ್ಯ ಡೇರ್‍ಡೆವಿಲ್ಸ್‍ಗೆ ಭಯ ಉಂಟುಮಾಡಿದೆ. ಬೌಲಿಂಗ್‍ನಲ್ಲಿ ದಾಳಿಕಾರರು ನಿರೀಕ್ಷೆಯಂತೆ ಗಮನ ಸೆಳೆಯುತ್ತಿಲ್ಲ. ಜಹೀರ್ ಖಾನ್ ಆಗಮನ ಡೆಲ್ಲಿಯ ಬೌಲಿಂಗ್‍ಗೆ ಶಕ್ತಿ ತುಂಬಿದೆಯಾದರೂ, ಒಟ್ಟಾರೆ ದಾಳಿಯಲ್ಲಿ ಯಾವುದೇ ಬೌಲರ್‍ನ ಮೇಲೆ ಹೆಚ್ಚು ನಂಬಿಕೆ ಇಡುವುದು ಕಷ್ಟವಾಗಿದೆ. ಮತ್ತೊಂದೆಡೆ ಆರಂಭದಲ್ಲಿ ಬರೀ ಸೋಲಿನ ಕಹಿ ಅನುಭವಿಸುತ್ತ ಈ ಋತುವನ್ನು ಅತ್ಯಂತ ಕೆಟ್ಟದಾಗಿ ಆರಂಭಿಸಿದ್ದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ.

ಕಳೆದ ಮೂರೂ ಪಂದ್ಯಗಳಲ್ಲಿ ರೋಚಕ ಗೆಲವು ದಾಖಲಿಸುವುದರೊಂದಿಗೆ ಪ್ಲೇ-ಆಫ್ ಸುತ್ತು ಪ್ರವೇಶಿಸುವ ಆಸೆ ಹೆಚ್ಚಿಸಿಕೊಂಡಿರುವ ಮುಂಬೈ ಆಟಗಾರರು, ಡೆಲ್ಲಿ ವಿರುದ್ಧವೂ ಸಕಾರಾತ್ಮಕ ಫಲಿತಾಂಶ ಪಡೆಯುವ ಲೆಕ್ಕಾಚಾರ ದಲ್ಲಿದ್ದಾರೆ. ಒಟ್ಟಿನಲ್ಲಿ ಗೆಲವಿನ ಅನಿವಾರ್ಯತೆಯಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್‍ಡೆವಿಲ್ಸ್ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com