ಆರ್‍ಸಿಬಿಗೆ ಜಯ ಬೇಕೇ ಬೇಕು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳೊಳಗೆ ಪ್ರವೇಶ ಪಡೆಯುವ..
ಆರ್ ಸಿಬಿ ತಂಡ
ಆರ್ ಸಿಬಿ ತಂಡ

 ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳೊಳಗೆ ಪ್ರವೇಶ ಪಡೆಯುವ ಮೂಲಕ ಪ್ಲೇ-ಆಫ್ ಸುತ್ತು ಪ್ರವೇಶಿಸುವ ಅವಕಾಶವನ್ನು ಹೊಂದಬೇಕಾದರೆ, ಮುಂದಿನಪಂದ್ಯಗಳಲ್ಲಿ ಗೆಲವು ದಾಖಲಿಸಲೇಬೇಕಾಗಿದೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈಗಾಗಲೇ ಪ್ಲೇ-ಆಫ್ ಸುತ್ತಿನ ಹಾದಿಯಿಂದ ಹೊರಬಿದ್ದಿದೆ. ಕಳೆದ ಬಾರಿ ಫೈನಲ್ ತಲುಪಿ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿದ್ದ ಪಂಜಾಬ್ ಆಟಗಾರರು ಈ ಸಲದ ಆವೃತ್ತಿಯಲ್ಲಿ ವ್ಯತಿರಿಕ್ತ ಪ್ರದರ್ಶನ ನೀಡುವ ಮೂಲಕ ಬಹುಬೇಗನೆ ಪ್ರಶಸ್ತಿ ಸುತ್ತಿನ ಹಾದಿಯಿಂದ ನಿರ್ಗಮಿಸಿದ್ದಾರೆ. ಈಗ ಇದೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ತವರು ನೆಲದಲ್ಲಿ ಎದುರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಬುಧವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯರು ಮುಖಾಮುಖಿಯಾಗಲಿದ್ದಾರೆ. ಪ್ರಸ್ತುತ ಬೆಂಗಳೂರು ಪಡೆ ಆಡಿದ 9 ಪಂದ್ಯಗಳಿಂದ 9 ಅಂಕಗಳನ್ನಷ್ಟೇ ಸಂಪಾದಿಸಿದೆ. ತಲಾ 4 ಗೆಲುವು ಮತ್ತು ಸೋಲುಗಳ ಫಲಿತಾಂಶಗಳನ್ನು ಅನುಭವಿಸಿದ್ದು, ಒಂದು ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದುಗೊಂಡಿತ್ತು. ಕಿಂಗ್ಸ್ ಪಂಜಾಬ್ 9 ಪಂದ್ಯಗಳನ್ನಾಡಿ ಕೇವಲ 2 ಜಯ ಮತ್ತು 7 ಅಘಾತಕಾರಿ ಸೋಲುಗಳೊಂದಿಗೆ 4 ಅಂಕಗಳ ಸಂಪಾದನೆಯಲ್ಲಿದೆ. ಪಂಜಾಬ್ ಆಟಗಾರರು ತಮ್ಮ ಉಳಿದ 5 ಲೀಗ್ ಪಂದ್ಯಗಳಲ್ಲಿ ಜಯಗಳಿಸಿದರೂ ಪ್ಲೇ-ಆಫ್ ಸುತ್ತಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ.

ಇನ್ನೇನಿದ್ದರೂ ಗೌರವಕ್ಕಾಗಿ ಮಾತ್ರ ಅದು ಹೋರಾಡಬೇಕಾದ ಪರಿಸ್ಥಿತಿಯಲ್ಲಿದೆ. ಹಾಗಾಗಿ, ಆರ್‍ಸಿಬಿ ವಿರುದ್ಧದ ಗೆಲವು ಪಂಜಾಬ್‍ನ ಕೊನೆಯ ಸ್ಥಾನವನ್ನೇನೂ ಬದಲಿಸದು. ಆದರೆ, ರಾಯಲ್ ಚಾಲೆಂಜರ್ಸ್‍ಗೆ ಮುಂದಿನ ಹಂತದ ಆಸೆ ಇನ್ನೂ ಜೀವಂತವಾಗುಳಿದಿದೆ. ವಿರಾಟ್ ಕೊಹ್ಲಿ ಸಾರಥ್ಯದ ಪಡೆ ತವರಿನಲ್ಲಿ ಗೆಲವಿನ ನಗೆ ಬೀರುವ ಮೂಲಕ ಮುನ್ನಡೆಯ ಆಸೆಯನ್ನು ಹೆಚ್ಚಿಸಿ ಕೊಳ್ಳಬೇಕಾಗಿದೆ. ಬೆಂಗಳೂರು ತಂಡ ಕೂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವುದೇ ದೊಡ್ಡ ಸಮಸ್ಯೆ. ಒಂದು ತಂಡವಾಗಿ ಮಿಂಚುವಲ್ಲಿ ಸಫಲತೆ ಕಂಡಿಲ್ಲ. ಒಂದು ಪಂದ್ಯದಲ್ಲಿ

ಒಬ್ಬೊಬ್ಬರು ಮಿಂಚುತ್ತಿದ್ದಾರೆ. ತಂಡದ ಶಕ್ತಿಯ ಪ್ರದರ್ಶನ ನೀಡುವಲ್ಲಿ ಮುಗ್ಗರಿಸುತ್ತಿರುವುದರಿಂದ ಆರ್‍ಸಿಬಿಗೆ ಗೆಲವಿನಷ್ಟೇ ಸೋಲುಗಳೂ ಬೆನ್ನಿಗಂಟಿಕೊಂಡು ಬಂದಿವೆ. ಅಚ್ಚರಿ ಎಂದರೆ, ಚೆನ್ನೈನಲ್ಲಿ ಆಡಿದ್ದ ತನ್ನ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ್ದ 149 ರನ್ ಗಳ ಸಾಧಾರಣ ಗುರಿಯನ್ನೂ ಸಹ ಯಶಸ್ವಿಯಾಗಿ ಬೆಂಬತ್ತಲು ಆರ್‍ಸಿಬಿಗೆ ಸಾಧ್ಯವಾಗಿರಲಿಲ್ಲ. ಆರಂಭಿಕ ವಿರಾಟ್ ಕೊಹ್ಲಿ ಬಿಟ್ಟರೆ, ಇತರೆ ಎಲ್ಲ ಬ್ಯಾಟ್ಸ್ ಮನ್ ಗಳು ಬೇಗನೆ ನಿರ್ಗಮಿಸಿದ್ದರು. ಪ್ರಮುಖವಾಗಿ ದಾಂಡಿಗರು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲರಾಗುತ್ತಿರುವುದು ಆರ್‍ಸಿಬಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಪಂದ್ಯದಲ್ಲಿ ಕ್ರಿಸ್ ಗೇಯ್ಲ್ ಗೆ ವಿಶ್ರಾಂತಿ ನೀಡಿ ನಿಕ್ ಮ್ಯಾಡಿನ್ಸನ್‍ಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಕಾಶವನ್ನು ಬಳಸಿಕೊಳ್ಳದ ಮ್ಯಾಡಿನ್ಸನ್ ಕೇವಲ 4 ರನ್‍ಗಳಿಸಿ ಔಟಾಗಿದ್ದರು.

ಆರ್‍ಸಿಬಿ ತಂಡದ ಸ್ಥಿತಿ ಹೇಗಿದೆಯಂದರೆ, ಎಬಿ ಡಿವಿಲಿಯರ್ಸ್ ಆಡಿದರೆ ಮಾತ್ರ ತಂಡ ಗೆಲ್ಲುತ್ತದೆ. ಒಂದು ವೇಳೆ ದಕ್ಷಿಣ ಆಫ್ರಿಕಾದ ಈ ಪ್ರತಿಭೆ ಕೈಕೊಟ್ಟರೆ, ಸೋಲೇ ಗತಿ ಎಂಬಂತಹ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ, ಈ ಪರಿಸ್ಥಿತಿ ಅಥವಾ ಈ ರೀತಿಯ ಮನೋಭಾವ ಬದಲಾಗಬೇಕಾದರೆ, ಪ್ರತಿಯೊಬ್ಬರೂ ಜವಾಬ್ದಾರಿ ಹೊರಬೇಕಾದ ಅಗತ್ಯವಿದೆ. ಮತ್ತೊಂದೆಡೆ, ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಈ ಪಂದ್ಯದಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಆದರೂ ಹೆಚ್ಚಾಗಿ ಕಹಿಯನ್ನೇ ಅನುಭವಿಸಿರುವ ಜಾರ್ಜ್ ಬೇಯ್ಲಿ ಸಾರಥ್ಯದ ಪಡೆಗೆ ಗೆದ್ದರೆ ಮರ್ಯಾದೆ ಸಿಗುವುದು. ಸೋತರೆ, ಮತ್ತೊಂದು ಅಪಮಾನಕ್ಕೆ ಗುರಿಯಾಗ ಬೇಕಾಗುತ್ತದೆ. ಬೆಂಗಳೂರು ತಂಡಕ್ಕೆ ಕಠಿಣ ಸವಾಲುಗಳನ್ನೇ ನಿಲ್ಲಿಸಿ ಗೆಲವಿನ ರುಚಿ ನೋಡಲು ಪ್ರಯತ್ನಿಸಲಿದೆ. ಹಾಗಾಗಿ, ಕೊಹ್ಲಿ ಪಡೆ ಎಚ್ಚರಿಕೆಯಿಂದಲೆ ಹೆಜ್ಜೆ ಇಡಬೇಕಾಗಿದೆ.

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್, ನಿಕ್ ಮ್ಯಾಡಿನ್ಸನ್, ಡೇವಿಡ್ ವೈಸ್, ಸೀನ್ ಅಬ್ಬಾಟ್, ರೀಲಿ ರೊಸ್ಸೊ, ಡಾರೆನ್ ಸಾಮಿ, ದಿನೇಶ್ ಕಾರ್ತಿಕ್, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಇಕ್ಬಾಲ್ ಅಬ್ದುಲ್ಲಾ, ಹರ್ಷಲ್ ಪಟೇಲ್, ವರುಣ್ ಅರುಣ್, ಶಿಶಿರ್ ಭವಾನೆ, ಶ್ರೀನಾಥ್ ಅರವಿಂದ್.

ಕಿಂಗ್ಸ್ ಇಲೆವೆನ್ ಪಂಜಾಬ್
ಜಾರ್ಜ್ ಬೇಯ್ಲಿ (ನಾಯಕ), ವೀರೇಂದ್ರ ಸೆಹವಾಗ್, ಮುರಳಿ ವಿಜಯ್, ಮನನ್ ವೋಹ್ರಾ, ಗ್ಲೆನ್ ಮ್ಯಾಕ್ಸ್ ವೆಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಅಕ್ಷರ್ ಪಟೇಲ್, ಮಿಚೆಲ್ ಜಾನ್ಸನ್, ಸಂದೀಪ್ ಶರ್ಮಾ, ರಿಶಿ ಧವನ್, ಕರಣವೀರ ಸಿಂಗ್, ಶಾರ್ದುಲ್ ಠಾಕೂರ್.

ಸ್ಥಳ: ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com