
ಭುವನೇಶ್ವರ: ಜಪಾನ್ ವಿರುದಟಛಿ ನಾಲ್ಕು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಒಂದರಲ್ಲಿ ಜಯಗಳಿಸಿರುವ ಭಾರತ, ಗುರುವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಮತ್ತೊಂದು ಗೆಲವು ಸಾಧಿಸುವ ಕಾತುರದಲ್ಲಿದೆ.
ಇತ್ತಂಡಗಳ ಮಧ್ಯೆ ಭಾನುವಾರ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ 1-1 ಗೋಲುಗಳಿಂದ ಡ್ರಾ ಆಗಿತ್ತು. ಮಂಗಳವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಹಾಗಾಗಿ, ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ, ಸರಣಿಯಲ್ಲಿ ಎದುರಾಳಿಗಿಂತ 2-0 ಅಂತರದ ಮುನ್ನಡೆ
ಸಾಧಿಸಿ ಪ್ರಶಸ್ತಿ ಖಚಿತಪಡಿಸಿಕೊಳ್ಳಲು ಭಾರತ ತವಕಿಸುತ್ತಿದೆ.
ಮೇಲ್ನೋಟಕ್ಕೆ ಜಪಾನ್ ತಂಡ, ಭಾರತಕ್ಕಿಂತ ದುರ್ಬಲ ಎಂದೆನಿಸಿದರೂ ಪ್ರಬಲ ಪೈಪೋಟಿ ನೀಡಬಲ್ಲ ತಂಡವೆಂಬುದು ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಸಾಬೀತಾಗಿದೆ. ಈ ಅನುಭವ ಭಾರತಕ್ಕೆ ಸಾಕಷ್ಟು ಪಾಠಗಳನ್ನೂ ಕಲಿಸಿದೆ. ಹಾಗಾಗಿಯೇ, ಮೂರನೇ ಪಂದ್ಯದಲ್ಲಿ ಜಪಾನ್ ಆಟಗಾರರು ಅನುಸರಿಸುವ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದು ಸೇರಿದಂತೆ, ಹಲವಾರು ವಿಚಾರಗಳಲ್ಲಿ ಸರ್ದಾರ್ ಸಿಂಗ್ ಪಡೆ ಈಗಾಗಲೇ ಸ್ಪಷ್ಟತೆ ಹೊಂದಿದೆ.
ಆದರೆ, ಜಪಾನ್ ಆಟಗಾರರಿಗೆ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಬೇಕಿದೆ. ಏಕೆಂದರೆ, ಈಗಾಗಲೇ ತಮ್ಮ ತಂತ್ರಗಳ ಪರಿಚಯ ಭಾರತ ತಂಡಕ್ಕೆ ಆಗಿರುವುದರಿಂದ ಇವರು ಇನ್ನು ಮುಂದೆ ಹೊಸತೇನನ್ನಾದರೂ ಪ್ರಯೋಗಗಳನ್ನು ಮಾಡಬೇಕು. ಇಲ್ಲವಾದರೆ, ಎದುರಾಳಿಗಳಿಂದ ಮಣ್ಣು ಮುಕ್ಕಬೇಕಾದೀತು. ಭಾರತ ತಂಡದ ಬಗ್ಗೆ ಮತ್ತಷ್ಟು ಹೇಳಬಹುದಾದರೆ, ನೂತನ ಕೋಚ್ ಪಾಲ್ ವ್ಯಾಸ್ ಆ್ಯಸ್ ಅವರ ಮಾರ್ಗದರ್ಶನದಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.
ಮೊದಲೆರಡು ಪಂದ್ಯಗಳಲ್ಲಿ ತಂಡದ ಸಾಂಘಿಕ ಪ್ರದರ್ಶನ ಶ್ಲಾಘನೀಯವಾಗಿದೆ. ಅದರಲ್ಲೂ ಮುಖ್ಯವಾಗಿ ಎಸ್.ಕೆ. ಉತ್ತಪ್ಪ, ಧರಮ್ ವೀರ್ ಸಿಂಗ್ ಹಾಗೂ ಯುವರಾಜ್ ವಾಲ್ಮೀಕಿ ಅವರಂಥ ಯುವ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಸ್ಥಳೀಯ ಆಟಗಾರ ಬೀರೇಂದ್ರ ಲಾಕ್ರಾ ಸಹ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದಾರೆ. ಜಪಾನ್ ತಂಡದ ಅತಿ ದೊಡ್ಡ ಸಕಾರಾತ್ಮಕ ಅಂಶವೆಂದರೆ, ಆಟಗಾರರ ನಡುವಿನ ಹೊಂದಾಣಿಕೆ. ಲಾಂಗ್ ಪಾಸ್‍ಗಳನ್ನು ನೀಡುವುದರಲ್ಲಿ ತಂಡದ ಆಟಗಾರರು ನಿಸ್ಸೀಮರು. ಆದರೆ, ಪೆನಾಲ್ಟಿ ಕಾರ್ನರ್‍ನಲ್ಲಿ ತಂಡ ದುರ್ಬಲ ಎನಿಸಿದೆ. ಈ ದೌರ್ಬಲ್ಯವನ್ನು ಮೆಟ್ಟಿ, ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿದರೆ, ಜಪಾನ್ ತಂಡ ಗುರುವಾರದ ಪಂದ್ಯವೂ ಸೇರಿದಂತೆ ಮುಂದಿನ ಪಂದ್ಯಗಳಲ್ಲಿ ತನ್ನ ಗೆಲವಿನ ಕನಸನ್ನು ನನಸು ಮಾಡಿಕೊಳ್ಳಬಹುದು.
Advertisement