ಬಿಎಫ್ ಸಿಗೆ ತವರಿನಲ್ಲಿ ಸವಾಲು

ಅತ್ಯುತ್ತಮ ಪ್ರದರ್ಶನ ನೀಡಿ ಏಷ್ಯನ್ ಕಾನ್ಫೆಡರೇಷನ್ ಕಪ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿರುವ ಬೆಂಗಳೂರು ಎಫ್ ಸಿ ಗೆ...
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ

ಬೆಂಗಳೂರು: ಅತ್ಯುತ್ತಮ ಪ್ರದರ್ಶನ ನೀಡಿ ಏಷ್ಯನ್ ಕಾನ್ಫೆಡರೇಷನ್ ಕಪ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿರುವ ಬೆಂಗಳೂರು ಎಫ್ ಸಿ ಗೆ ತವರಿನಲ್ಲಿ ಈಗ ಅಗ್ನಿ ಪರೀಕ್ಷೆ ಎದುರಾಗಿದೆ.
ಟೂರ್ನಿಯಲ್ಲಿ ಇ ಗುಂಪಿನಲ್ಲಿ ಸ್ಥಾನ ಪಡೆದಿರುವ ಬೆಂಗಳೂರು ಎಫ್ ಸಿ ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ರಬಲ ತಂಡವಾಗಿರುವ ಇಂಡೋನೇಷಿಯಾದ ಪೆರ್ಸಿಪುರ, ಜಯಪುರ ವಿರುದ್ಧ ಸೆಣೆಸಲಿದೆ. ಪೆರ್ಸಿಪುರ ತಂಡ ಈವರೆಗೂ ಟೂರ್ನಿಯಲ್ಲಿ ಆಡಿರುವ ಪಂದ್ಯಗಳಲ್ಲಿ ಸೋಲನುಭವಿಸಿಲ್ಲ. ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಜಯ ಹಾಗೂ 1 ರಲ್ಲಿ ಡ್ರಾ ಸಾಧಿಸಿ ಅಜೇಯವಾಗುಳಿದಿದೆ. ಅಲ್ಲದೆ 13 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ.
ಇತ್ತ ಬೆಂಗಳೂರು ಎಫ್ ಸಿ ಸಹ ಆಡಿರುವ ಐದು ಪಂದ್ಯಗಳ ಪೈಕಿ 4ರಲ್ಲಿ ಜಯ ಹಾಗೂ 1 ಪಂದ್ಯದಲ್ಲಿ ಸೋಲನುಭವಿಸಿದೆ. 12 ಅಂಕಗಳೊಂದಿಗೆ ಗುಂಪಿನಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಕ್ವಾರ್ಟರ್ ಪೈನಲ್ ಹಂತದಲ್ಲಿ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.
ಬೆಂಗಳೂರು ಎಫ್ ಸಿ ಪೆರ್ಸಿಪುರ ಜಯಪುರ ವಿರುದ್ಧ ಅದರ ನೆಲದಲ್ಲಿ ಸೋಲನುಭವಿಸಿತ್ತು. ಹಾಗಾಗಿ ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸೇಡು ತೀರಿಸಿಕೊಳ್ಳಲು ಸುನೀಲ್ ಛೆಟ್ರಿ ಪಡೆ ಸಿದ್ಧವಾಗಿದೆ.
ಆತ್ಮ ವಿಶ್ವಾಸದಲ್ಲಿ ಬಿಎಸ್ ಫಿ...
ಬೆಂಗಳೂರು ಬಿಎಫ್ ಸಿ ತಂಡ ಐ ಲೀಗ್ ಹಾಗೂ ಎಎಫ್ ಸಿ ಕಪ್ ಎರಡೂ ಟೂರ್ನಿಗಳಲ್ಲಿ ಗೆಲುವು ದಾಖಲಿಸುತ್ತಾ ಬಂದಿದೆ. ಕಳೆದ 11 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ದಾಖಲಿಸಿದರೆ, 3ರಲ್ಲಿ ಡ್ರಾ ಸಾಧಿಸಿ ಅಜೇಯವಾಗಿ  ಮುಂದುವರಿದಿದೆ. ಮುಂದಿನ ದಿನಗಳಲ್ಲೂ ಇದೇ ಪ್ರದರ್ಶನ ಮುಂದುವರಿಸುವ ಗುರಿ ಆ್ಯಶ್ಲೆ ವೆಸ್ಟ್ ವುಡ್ ಪಡೆಯದ್ದಾಗಿದೆ.
ತಂಡದಲ್ಲಿ ಕೋಚ್  ಆ್ಯಶ್ಲೆ ವೆಸ್ಟ್ ವುಡ್ ತಂತ್ರಗಾರಿಕೆ ಪರಿಣಾಮಕಾರಿಯಾದ ಫಲಿತಾಂಶ ನೀಡುತ್ತಿದೆ. ಅಲ್ಲದೆ ಯುವ ಆಟಗಾರರಾದ ಯುಗೆನ್ಸನ್ ಲಿಂಗ್ಡೋ, ಶಂಕರ್ ರಿನೋ ಆಂಟೋ ಮತ್ತು ವಿಶಾಲ್ ಕುಮಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರೊಂದಿಗೆ ಪ್ರಮುಖ ಸ್ಪೈಕರ್ ಗಳಾದ ರೂನಿ, ಬೈಕೊಕಿ, ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಇನ್ನು ರಕ್ಷಣಾತ್ಮಕ ವಿಭಾಗದಲ್ಲಿ ಕರ್ಟಿಸ್ ಒಸಾನೊ, ಕೀಗನ್ ಪೆರೇರಾ, ಜಾನ್ ಜಾನ್ಸನ್ ಎದುರಾಳಿ ತಂಡಕ್ಕೆ ತಡೆಗೋಡೆಯಾಗಿದ್ದಾರೆ. ಒಟ್ಟಿನಲ್ಲಿ ತಂಡ ಬಲಿಷ್ಟವಾಗಿದ್ದು ತವರಿನಲ್ಲಿ ಎದುರಿಸಲು ಸಜ್ಜಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com