
ನವದೆಹಲಿ: ಇಡೀ ವಿಶ್ವದ ಗಮನವನ್ನೇ ತನ್ನತ್ತ ಸೆಳೆಯುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಬಾಂಧವ್ಯ ಮತ್ತೆ ಬೆಸೆಯುವ ಕಾಲ ಸಮೀಪಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಉಭಯ ದೇಶಗಳ ನಡುವೆ ಕ್ರಿಕೆಟ್ ಬಾಂಧವ್ಯದಲ್ಲಿ ಬಿರುಕು ಮೂಡಿಯೇ ಇತ್ತು. 26/11ರ ಮುಂಬೈ ಮೇಲಿನ ದಾಳಿಯ ನಂತರ ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಸಂಬಂಧವನ್ನು ಭಾರತ ಕಡಿದುಕೊಂಡಿತ್ತು. ತಟಸ್ಥ ಸ್ಥಳಗಳಲ್ಲಿ ನಡೆದ ವಿಭಿನ್ನ ಸರಣಿಗಳಲ್ಲಿ ಪರಸ್ಪರ ಎದುರಾಗಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸರಣಿ ಈ ನಾಲ್ಕು ವರ್ಷಗಳಲ್ಲಿ ನಡೆದಿಲ್ಲ. ಆದರೀಗ, ಭಾರತ ಸರ್ಕಾರ, ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಸಂಬಂಧ ಬೆಳೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆ ಮೂಲಕ ಎರಡೂ ದೇಶಗಳ ನಡುವೆ
ಮತ್ತೆ ಐತಿಹಾಸಿಕ ಸರಣಿಗೆ ಹೊಸ ಮುನ್ನುಡಿ ಸಿಕ್ಕಂತಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಶಹರಿಯಾರ್ ಖಾನ್ ಮೊನ್ನೆಯಷ್ಟೇ ಬಿಸಿಸಿಐ ಅಧ್ಯಕ್ಷ ಜಗನ್‍ಮೋಹನ್ ದಾಲ್ಮಿಯಾ ಅವರನ್ನು ಭೇಟಿ ಮಾಡಿ ಎರಡೂ ದೇಶಗಳ ನಡುವೆ ಕ್ರಿಕೆಟ್ ಬಾಂಧವ್ಯ
ಪುನರಾರಂಭಿಸಲು ಸಹಕಾರ ಕೋರಿದ್ದರು. ಇದೀಗ ಪಿಸಿಬಿ ಮುಖ್ಯಸ್ಥರು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೊಂದಿಗೂ ಮಾತುಕತೆ ನಡೆಸಿ ಉಭಯ ರಾಷ್ಟ್ರಗಳ ನಡುವೆ ಸರಣಿ ಆರಂಭಿಸುವ ಕುರಿತು ಚರ್ಚಿಸಿದ್ದಾರೆ.ಮೂಲಗಳ ಪ್ರಕಾರ, ಪಾಕಿಸ್ತಾನ ದತ್ತು ಪಡೆದ ತವರು ಅಂಗಣವಾಗಿರುವ ಯುಎಇನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಉಭಯ ತಂಡಗಳ ಮಧ್ಯೆ ಡಿಸೆಂಬರ್‍ನಲ್ಲಿ ಸರಣಿ ನಡೆಯುವ ಸಾಧ್ಯತೆಯಿದ್ದು, ಭಾರತ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ. ಕ್ರಿಕೆಟ್ ಅಖಾಡದಲ್ಲಿ ಬದಟಛಿ ವೈರಿಗಳೆನಿಸಿರುವ ಭಾರತ-ಪಾಕಿಸ್ತಾನ ನಡುವೆ ಮತ್ತೆ ಕ್ರಿಕೆಟ್ ಸಂಬಂಧ ಬೆಸೆಯುತ್ತಿರುವುದಕ್ಕೆ ಅನೇಕ ಮಾಜಿ ಕ್ರಿಕೆಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಎರಡೂ ತಂಡಗಳ ಆಟಗಾರರ ನಡುವಿನ ಹೋರಾಟವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದೇನೆ.
ಮೈದಾನದಲ್ಲಿ ಬದ್ಧ ಎದುರಾಳಿ ಎನಿಸಿದರೂ, ಮೈದಾನದ ಆಚೆಗೆ ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ ಎಂದು ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಹೇಳಿದ್ದಾರೆ. ಶಹರಿಯಾರ್ ತಮ್ಮನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ಖುಷಿಯಾಗಿದೆ. ಸರಣಿಯ ಬಗ್ಗೆ ಒಮ್ಮೆ ಎಲ್ಲವೂ ಅಂತ್ಯಗೊಂಡಲ್ಲಿ ಸರ್ಕಾರದ ಬಳಿ ಹೋಗುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ 2007ರಿಂದ ಪೂರ್ಣ ಪ್ರಮಾಣದಲ್ಲಿ ಸರಣಿ ಆಡಿಲ್ಲ. ಪ್ರಮುಖವಾಗಿ ರಾಜಕೀಯ ಕಾರಣಗಳಿಗಾಗಿ ಅದು ಸಾಧ್ಯವಾಗಿಲ್ಲ. ಆದರೀಗ ಮತ್ತೆ ಈ ಆಸೆ ಚಿಗುರಿದ್ದು, ಎರಡೂ ದೇಶಗಳ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಎನ್ನಬಹುದು.
Advertisement