
ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮತ್ತೆ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಗುರುವಾರ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ (Badminton World Federation-BWF) ಬಿಡುಗಡೆಗೊಳಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಮೊದಲ ಶ್ರೇಯಾಂಕ ಪಡೆದಿದ್ದಾರೆ. ಒಟ್ಟು 82342 ಅಂಕಗಳನ್ನು ಸಂಪಾದಿಸಿರುವ ಸೇನಾ ಚೀನಾದ ಲೀ ಕ್ಸೆರುಯಿ ಅವರನ್ನು ಹಿಂದಿಕ್ಕುವ ಮೂಲಕ ತಮ್ಮ ಸ್ಥಾನಕ್ಕೆ ಮರಳಿದ್ದಾರೆ. ಲೀ ಕ್ಸೆರುಯಿ ಅವರು 80764 ಅಂಕಗಳೊಂದಿಗೆ 2 ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ತಿಂಗಳು ಮೊಟ್ಟ ಮೊದಲ ಬಾರಿಗೆ ಸೈನಾ ಮೊದಲ ಸ್ಥಾನಕ್ಕೇರಿದ್ದರು. ಬಳಿಕ ನಡೆದ ಸರಣಿಯಲ್ಲಿ ಚೀನಾದ ಆಟಗಾರ್ತಿ ಲೀ ಕ್ಸೆರುಯಿ ಮೇಲುಗೈ ಸಾಧಿಸಿದ್ದರು. ಹೀಗಾಗಿ ಸೈನಾ ಅವರ ಮೊದಲ ಸ್ಥಾನ ಬಂದ ವೇಗದಲ್ಲಿಯೇ ಕ್ಸೆರುಯಿ ಅವರ ಪಾಲಾಗಿತ್ತು. ಒಲಿಂಪಿಕ್ ಕೂಟದ ಕಂಚಿನ ಪದಕ ವಿಜೇತೆಯಾದ ಸೈನಾ ಮೇ 26ರಂದು ಪ್ರಾರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್ ಸರಣಿಗೂ ಮೊದಲೇ ಮತ್ತೆ ತಮ್ಮ ಅಗ್ರ ಶ್ರೇಯಾಂಕವನ್ನು ಗಳಿಸಿಕೊಂಡಿರುವುದು ಅವರ ಆತ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.
ಈ ಮಧ್ಯೆ ಭಾರತದ ಮತ್ತೋರ್ವ ಪ್ರತಿಭಾವಂತ ಆಟಗಾರ್ತಿ ಪಿ.ವಿ. ಸಿಂಧು ಅವರು ತಮ್ಮ ಸ್ಥಾನವನ್ನು ಕಳೆದುಕೊಂಡು 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ನಲ್ಲಿ ಕೆ. ಶ್ರೀಕಾಂತ್ ತಮ್ಮ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪಿ. ಕಶ್ಯಪ್ ಮತ್ತು ಎಚ್.ಎಸ್. ಪರ್ಣೋಯ್ ಕ್ರಮವಾಗಿ 13 ಮತ್ತು 15ನೇ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.
Advertisement