ಚೆನ್ನೈ ಮತ್ತು ಮುಂಬೈ ತಂಡದ ನಡುವಿನ ಪಂದ್ಯ
ಚೆನ್ನೈ ಮತ್ತು ಮುಂಬೈ ತಂಡದ ನಡುವಿನ ಪಂದ್ಯ

ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ

ಬೌಂಡರಿ, ಸಿಕ್ಸರ್‍ಗಳ ಸುರಿಮಳೆ, ಎಂಟು ತಂಡಗಳ ರೋಚಕ ಹಣಾಹಣಿ, ಮಾರಕ ಬೌಲಿಂಗ್, ಆಕರ್ಷಕ ಫೀಲ್ಡಿಂಗ್, ಮನಮೋಹಕ ಕ್ಯಾಚ್ ಹೀಗೆ ಸಾಕಷ್ಟು ರೀತಿಯಲ್ಲಿ..
Published on

ಕೋಲ್ಕತಾ: ಬೌಂಡರಿ, ಸಿಕ್ಸರ್‍ಗಳ ಸುರಿಮಳೆ, ಎಂಟು ತಂಡಗಳ ರೋಚಕ ಹಣಾಹಣಿ, ಮಾರಕ ಬೌಲಿಂಗ್, ಆಕರ್ಷಕ ಫೀಲ್ಡಿಂಗ್, ಮನಮೋಹಕ ಕ್ಯಾಚ್ ಹೀಗೆ ಸಾಕಷ್ಟು ರೀತಿಯಲ್ಲಿ ಸುಮಾರು ಎರಡು ತಿಂಗಳ ಕಾಲ ಅಭಿಮಾನಿಗಳನ್ನು ರಂಜಿಸಿದ್ದ ಚುಟುಕು ಕ್ರಿಕೆಟ್ ಜಾತ್ರೆ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಎಂಟನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಈಗ ಚಾಂಪಿಯನ್ ಯಾರು ಎಂದು ನಿರ್ಧಾರವಾಗುವುದು ಮಾತ್ರ ಬಾಕಿ ಉಳಿದಿದೆ. ಈ ಪಟ್ಟವನ್ನು ಅಲಂಕರಿಸಲು ಅಂತಿಮ

ಕದನದಲ್ಲಿ ಸೆಣಸಾಡುತ್ತಿರುವುದು ಮಾಜಿ ಚಾಂಪಿಯನ್‍ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್. ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದೆ. ಈಗಾಗಲೇ ಎರಡು ಬಾರಿ ಪ್ರಶಸ್ತಿ ಎತ್ತಿ ಹಿಡಿದಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‍ಕೆ ಮೂರನೇ ಬಾರಿಗೆ ಯಶಸ್ಸು ಸಾಧಿಸುವುದೇ, ಅಥವಾ ಮುಂಬೈ ಇಂಡಿಯನ್ಸ್ ತಂಡ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವುದೇ ಎಂಬುದು ಎಲ್ಲರಲ್ಲಿರುವ ಕುತೂಹಲ.

ಐಪಿಎಲ್‍ನಲ್ಲಿ ಸ್ಥಿರ ಪ್ರದರ್ಶನದ ಮೂಲಕ 6ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಪ್ರಶಸ್ತಿ ಗೆಲ್ಲುವ ಹಠದಲ್ಲಿದೆ. ಇನ್ನು ಪ್ರಸಕ್ತ ಟೂರ್ನಿಯ ಆರಂಬಿsಕ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಮುಂಬೈ ಇಂಡಿಯನ್ಸ್, ನಂತರದ ಹಂತದಲ್ಲಿ ಪಿsನಿಕ್ಸ್ ರೀತಿಯಲ್ಲಿ ಎದ್ದು ಬಂದು ಸಂಘಟಿತ ಪ್ರದರ್ಶನದ ಮೂಲಕ ಫೈನಲ್‍ಗೆ ಬಂದು ನಿಂತಿದೆ. 2010ರಲ್ಲಿ ಈ ಎರಡೂ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲವು ದಾಖಲಿಸುವ ಮೂಲಕ ಪ್ರಶಸ್ತಿಯನ್ನು ವಶಪಡಿಸಿಕೊಂಡಿತ್ತು. ಹಾಗಾಗಿ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು, ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ರೆಡ್ ಹಾಟ್ ಫಾರ್ಮ್ ನಲ್ಲಿ ಮುಂಬೈ
ಮುಂಬೈ ಇಂಡಿಯನ್ಸ್ ತಂಡ ಈಗ ಅತ್ಯದ್ಭುತ ಫಾರ್ಮ್ ನಲ್ಲಿದೆ. ಟೂರ್ನಿಯ ಆರಂಬಿsಕ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲನುಭವಿಸಿದ್ದ ಮುಂಬೈ, ಕಳೆದ 11 ಪಂದ್ಯಗಳಲ್ಲಿ 9ರಲ್ಲಿ ಗೆಲವು, ಕೇವಲ 2ರಲ್ಲಿ ಮಾತ್ರ ಸೋಲನುಭವಿಸಿದೆ. ಸ್ಥಿರ ಹಾಗೂ ಸಂಘಟಿತ ದಾಳಿಯ ಮೂಲಕ ಎದುರಾಳಿಗಳನ್ನು ಬಗ್ಗು ಬಡೆದಿರುವ ಮುಂಬೈ ಆತ್ಮ ವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

ಇನ್ನು ಪ್ರಸಕ್ತ ಟೂರ್ನಿಯಲ್ಲಿ ಮೊದಲ ಕ್ವಾಲಿಫೈಯರ್ ಸೇರಿದಂತೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆ ಪೈಕಿ ಎರಡರಲ್ಲಿ ಮುಂಬೈ ಗೆಲವು ದಾಖಲಿಸಿದರೆ, ಚೆನ್ನೈ 1ರಲ್ಲಿ ಮಾತ್ರ ಜಯಿಸಿದೆ. ಹಾಗಾಗಿ ಈ ಪಂದ್ಯದಲ್ಲಿ ಮುಂಬೈ ಮಾನಸಿಕವಾಗಿ ಮೇಲುಗೈ ಸಾಧಿಸಿದೆ.

ತಂಡದಲ್ಲಿ ಲೆಂಡ್ಲ್ ಸಿಮನ್ಸ್ ಮತ್ತು ಪಾರ್ಥಿವ್ ಪಟೇಲ್ ಜೋಡಿ ಅತ್ಯುತ್ತಮ ಆರಂಭ ನೀಡುತ್ತಿದೆ. ಕೀರನ್ ಪೊಲಾರ್ಡ್ ಕೇವಲ ತಮ್ಮ ಅಬ್ಬರದ ಬ್ಯಾಟಿಂಗ್ ಅಷ್ಟೇ ಅಲ್ಲ, ಬೌಲಿಂಗ್ ಮೂಲಕವೂ ಮುಂಬೈ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ತಂಡಕ್ಕೆ ಜಾಂಟಿ ರೋಡ್ಸ್ ಕ್ಷೇತ್ರ ರಕ್ಷಣೆಯ ಕೋಚ್ ಆಗಿದ್ದರೂ ಆಟಗಾರರು ಮಾತ್ರ ಮೈದಾನದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು

ಸರಿಪಡಿಸಿಕೊಳ್ಳದಿದ್ದರೆ, ಚೆನ್ನೈ ಪಂದ್ಯದ ಮೇಲೆ ಹಿಡಿತ ಸಾಧಿಸಲಿದೆ.

ಚೆನ್ನೈಗೆ ಧೋನಿ ತಂತ್ರದ ಬಲ
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಮುಖ ಆಟಗಾರ ಬ್ರೆಂಡನ್ ಮೆಕಲಂ ಅನುಪಸ್ಥಿತಿಯಲ್ಲಿದ್ದರೂ, ಕಳೆದ ಪಂದ್ಯದಲ್ಲಿ ಮೈಕ್ ಹಸ್ಸಿ ಅವರ ಜವಾಬ್ದಾರಿಯುತ ಆಟ ತಂಡ ಫೈನಲ್ ಪ್ರವೇಶಿಸುವಂತೆ ಮಾಡಿತು.

ಪರಿಸ್ಥಿತಿಗೆ ತಕ್ಕಂತೆ ರಣತಂತ್ರ ರೂಪಿಸುವ ಧೋನಿ ನಾಯಕತ್ವ ತಂಡಕ್ಕೆ ಆನೆ ಬಲ ಎಂದರೆ ತಪ್ಪಿಲ್ಲ. ಪವನ್ ನೇಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವುದು, ಜಡೇಜಾ ಅವರ ಕಳಪೆ ಫಾರ್ಮ್ ಅನ್ನು ಮರೆಮಾಚಿದೆ. ಇನ್ನು ಆಶೀಶ್ ನೆಹ್ರಾ ಹಾಗೂ ಅಶ್ವಿನ್ ಪ್ರಮುಖ ಟ್ರಂಪ್ ಕಾರ್ಡ್ ಬೌಲರ್‍ಗಳಾಗಿದ್ದಾರೆ. ಒಟ್ಟಿನಲ್ಲಿ ಪ್ರಸ್ತುತ
ಪರಿಸ್ಥಿತಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು, ರೋಚಕ ಫೈನಲ್ ಪಂದ್ಯದ ನಿರೀಕ್ಷೆ ಹುಟ್ಟಿಸಿದೆ.

ಸ್ಥಳ: ಕೋಲ್ಕತಾ, ಪಂದ್ಯ ಆರಂಭ: ರಾತ್ರಿ 8 ಗಂಟೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com