ಸಚಿನ್ ಕ್ಷಮೆ ಕೋರಿದ ಬ್ರಿಟಿಷ್ ಏರ್‌ವೇಸ್
ಮುಂಬೈ: ಕುಟುಂಬ ವರ್ಗಕ್ಕಾಗಿ ಕಾಯ್ದಿರಿಸಲಾಗಿದ್ದ ಸೀಟುಗಳನ್ನು ವಿಮಾನದಲ್ಲಿ ಸೀಟು ಖಾಲಿ ಇದ್ದರೂ, ದೃಢೀಕರಿಸದ ಬ್ರಿಟಿಷ್ ಏರ್‌ವೇಸ್ ವಿರುದ್ಧ ಹೆಸರಾಂತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ಮತ್ತು ಅವರ ಅಭಿಮಾನಿಗಳು ಬ್ರಿಟಿಷ್ ಏರ್ ವೇಸ್ ವಿರುದ್ಧ ಛೀಮಾರಿ ಹಾಕಿ ಟೀಕೆಗಳ ಸುರಿಮಳೆ ಸುರಿಸುತ್ತಲೇ ಎಚ್ಚೆತ್ತುಕೊಂಡ ಏರ್‌ವೇಸ್, ಸಚಿನ್ ಅವರಲ್ಲಿ ಕ್ಷಮೆ ಯಾಚಿಸಿದೆ.
“ನನಗೆ ಸಿಟ್ಟು, ನಿರಾಸೆ ಹಾಗೂ ಹತಾಶೆ ಒಮ್ಮೆಲೇ ಆವರಿಸಿದ್ದು ತೀವ್ರ ಬೇಸರಗೊಂಡಿದ್ದೇನೆ. ಕುಟುಂಬ ಸದಸ್ಯರಿಗಾಗಿ ಕಾಯ್ದಿರಿಸಿದ್ದ ಸೀಟುಗಳನ್ನು ದೃಢೀಕರಿಸದ ಏರ್‌ವೇಸ್ ಬಹಳಷ್ಟು ಬೇಸರ ತರಿಸಿದೆ" ಎಂದು ಸಚಿನ್, ತಮ್ಮ ಈ ಅಸಮಾಧಾನವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೊರಹಾಕಿದ್ದಾರೆ. ಸಚಿನ್ ಟ್ವಿಟರ್‌ನಲ್ಲಿ ಹೀಗೆ ತಮ್ಮ ಅಸಮಾಧಾನ ತೋಡಿಕೊಂಡ ಬೆನ್ನಲ್ಲೇ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ತಮ್ಮ ಸಿಬ್ಬಂದಿಯಿಂದ ಕಿರುಕುಳ ಉಂಟಾಗಿದ್ದಕ್ಕಾಗಿ ಬ್ರಿಟಿಷ್ ಏರ್‌ವೇಸ್, ಸಚಿನ್ ಅವರ ಕ್ಷಮೆ ಕೋರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಪನಿ, “ಪ್ರಿಯ ಸಚಿನ್ ಅವರೇ, ನಿಮಗೆ ನಮ್ಮ ಸಿಬ್ಬಂದಿಯಿಂದ ತೊಂದರೆಯಾದ ಪ್ರಕರಣ ತಡವಾಗಿ ತಿಳಿದುಬಂದಿದ್ದು, ಅದಕ್ಕಾಗಿ ವಿಷಾದಿಸುತ್ತೇವೆ. ನಿಮ್ಮ ಪೂರ್ಣ ಹೆಸರು, ವಿವರ ಮತ್ತು ವಿಳಾಸವನ್ನು ನೀಡಿದರೆ ನಿಮ್ಮ ಲಗ್ಗೇಜನ್ನು ನಿಮಗೆ ತಲುಪಿಸುತ್ತೇವೆ" ಎಂದು ಹೇಳಿದೆ. ಅಂದಹಾಗೆ ಪ್ರಸಕ್ತ ಆಲ್‌ಸ್ಟಾರ್ಸ್ ಕ್ರಿಕೆಟ್ ಸರಣಿಗಾಗಿ ಸಚಿನ್ ಅಮೆರಿಕ ಪ್ರವಾಸದಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ