ಡ್ರಾಗೆ ತೃಪ್ತಿಪಟ್ಟ ಸರ್ದಾರ್ ಪಡೆ

ಪಂದ್ಯದ ಆರಂಭದಲ್ಲೇ ಪ್ರವಾಸಿ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟು ಒತ್ತಡಕ್ಕೆ ಸಿಲುಕಿದರೂ ನಂತರ ಚೇತರಿಕೆಯ ಆಟ ಆಡಿದ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್...
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
Updated on

ರಾಯ್ ಪುರ: ಪಂದ್ಯದ ಆರಂಭದಲ್ಲೇ ಪ್ರವಾಸಿ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟು ಒತ್ತಡಕ್ಕೆ ಸಿಲುಕಿದರೂ ನಂತರ ಚೇತರಿಕೆಯ ಆಟ ಆಡಿದ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯಲ್ಲಿ ಜರ್ಮನಿ ವಿರುದ್ಧ ಡ್ರಾ ಸಾಧಿಸಿದೆ. 

ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 1-1 ಗೋಲು ಅಂತರದಲ್ಲಿ ಜರ್ಮನಿ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಆರಂಭಿಕ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 0-3 ಗೋಲುಗಳ ಸೋಲನುಭವಿಸಿದ್ದ ನಂತರ ಭಾರತ ಟೂರ್ನಿಯಲ್ಲಿ ಇನ್ನಷ್ಟೇ ಜಯ ಕಾಣಬೇಕಿದೆ. 
ಮುಂದಿನ ವರ್ಷ ರಿಯೋ ಒಲಿಂಪಿಕ್ಸ್‍ಗೆ ತಯಾರಿ ನಡೆಸಲು ಈ ಟೂರ್ನಿ ಮಹತ್ವವಾಗಿದೆ. ಹಾಗಾಗಿ ಪ್ರತಿ ತಂಡವೂ ಅತ್ಯುತ್ತಮ ಪ್ರದರ್ಶನ ನೀಡಲು ತುದಿಗಾಲಲ್ಲಿ ನಿಂತಿವೆ. ಭಾರತ ತಂಡ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿದ್ದು, ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಪಂದ್ಯದಲ್ಲಿ ಭಾರತ ನಿರೀಕ್ಷಿತ ಮಟ್ಟದ ಆರಂಭ ಪಡೆಯಲಿಲ್ಲ. 
ಪಂದ್ಯದ ಆರಂಭದಲ್ಲಿ ಚುರುಕಿನ ಆಟದೊಂದಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಜರ್ಮನಿ, ಆತಿಥೇಯರನ್ನು ಕೆಲ ಕಾಲ ಮಂಕಾಗಿಸಿತು. 6ನೇ ನಿಮಿಷದಲ್ಲಿ ಜರ್ಮನಿಯ ನಿಕ್ಲಸ್ ವೆಲೆನ್ ಆಕರ್ಷಕ ಗೋಲು ದಾಖಲಿಸುವ ಮೂಲಕ ಆರಂಭದಲ್ಲೇ ಆತಿಥೇಯರ ಮೇಲೆ ಒತ್ತಡ ಹಾಕಿತು. ನಂತರದ ಹಂತದಲ್ಲಿ ತಂಡ ಸಂಘಟಿತ ದಾಳಿ ನಡೆಸುವತ್ತ ಗಮನ ಹರಿಸಿತು. ಆ ಮೂಲಕ ಪಂದ್ಯದ ಮೊದಲಾರ್ಧದಲ್ಲಿ ಜರ್ಮನಿ 1-0 ಮುನ್ನಡೆ ಪಡೆದುಕೊಂಡಿತು. ಇನ್ನು ಪಂದ್ಯದ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು.
ಈ ಹಂತದಲ್ಲಿ ಭಾರತ ತಂಡ ಗೋಲು ದಾಖಲಿಸಲೇಬೇಕು ಎಂಬ ಹಠದೊಂದಿಗೆ ದಾಳಿ ನಡೆಸಿತು. ಈ ವೇಳೆ 47ನೇ ನಿಮಿಷದಲ್ಲಿ ಭಾರತದ ಆಕಾಶ್‍ದೀಪ್ ಸಿಂಗ್ ಉತ್ತಮ ಗೋಲು ದಾಖಲಿಸಿ ತಂಡ ಪಂದ್ಯದಲ್ಲಿ ಸಮಬಲ ಸಾಧಿಸುವಂತೆ ಮಾಡಿದರು. ಆ ಮೂಲಕ ಭಾರತ ಸತತ ಎರಡನೇ ಸೋಲಿನಿಂದ ಪಾರಾಯಿತು. ಪಂದ್ಯದ ಅಂತಿಮ ಹಂತದಲ್ಲಿ ಉಭಯ ತಂಡಗಳು ಮುನ್ನಡೆ ಸಾಧಿಸಲು ಪ್ರಯತ್ನಿಸಿದರೂ ಯಾವುದೇ ಗೋಲು ದಾಖಲಾಗದ ಪರಿಣಾಮ ಪಂದ್ಯ ಡ್ರಾ ಫಲಿತಾಂಶ ಕಂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com