
ಜೊಹೊರ್ ಬಹುರ್: ಹಾಲಿ ಚಾಂಪಿಯನ್ ಭಾರತ 21 ವರ್ಷದೊಳಗಿನವರ ಹಾಕಿ ತಂಡ ಸುಲ್ತಾನ್ ಜೊಹೊರ್ ಕಪ್ ಹಾಕಿ ಟೂರ್ನಿಯಲ್ಲಿ ಎರಡನೇ ಜಯ ಸಂಪಾದಿಸಿದೆ.
ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ತನ್ನ ಪ್ರತಿಸ್ಪರ್ಧಿ ಅರ್ಜೆಂಟೀನಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದೆ. ಈ ಗೆಲವಿನ ಮೂಲಕ ಭಾರತ ಸೆಮಿಫೈನಲ್‍ನತ್ತ ತನ್ನ ಹೆಜ್ಜೆ ಇಟ್ಟಿದೆ. ಪಂದ್ಯದ ಮೊದಲ ನಿಮಿಷದಿಂದಲೇ ಭಾರತ ಆಕ್ರಮಣಕಾರಿ ದಾಳಿ ನಡೆಸಿದ ಪರಿಣಾಮ ಅರ್ಜೆಂಟೀನಾ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ಗೊಂದಲಕ್ಕೆ ಒಳಗಾಯಿತು.
ಭಾರತ ತಂಡದ ಪರ ಅರ್ಮಾನ್ ಖುರೇಶಿ(3ನೇ), ಗುರ್ಜಂತ್ ಸಿಂಗ್(11ನೇ), ನೀಲಕಂಠ ಶರ್ಮಾ(50ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು.
ಇನ್ನು ಅರ್ಜೆಂಟೀನಾ ಪರ ಮೈಕೊ ಕ್ಯಾಸೆಲ್ಲಾ (39ನೇ) ಹಾಗೂ ನಿಕೋಲಸ್ ಕೀನನ್(54ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದ ಆರಂಭದಲ್ಲೇ ಭಾರತ ಸಂಘಟಿತ ದಾಳಿ ನಡೆಸಿದ ಪರಿಣಾಮ ಅರ್ಮಾನ್ 3ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ನಂತರ 11ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಪರಿಣಾಮ ಪಂದ್ಯದ ಮೊದಲಾರ್ಧದಲ್ಲಿ ಭಾರತ 2-0 ಮುನ್ನಡೆಯಲ್ಲಿತ್ತು. ದ್ವಿತಿಯಾರ್ಧದಲ್ಲಿ ಅರ್ಜೆಂಟೀನಾ ಉತ್ತಮ ಪ್ರದರ್ಶನ ನೀಡಿತು ಈ ಅವಧಿಯಲ್ಲಿ 2 ಗೋಲು ದಾಖಲಿಸಿತಾದರೂ, ಭಾರತದ ಪರ ನೀಲಕಂಠ ಶರ್ಮಾ ಗೋಲು ದಾಖಲಿಸಿ ತಂಡವನ್ನು ಗೆಲವಿನತ್ತ ಕೊಂಡೊಯ್ದರು.
ಭಾರತ ತಂಡ ಗುರುವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ.
Advertisement