ನವದೆಹಲಿ: ನೆನೆಗುದಿಗೆ ಬಿದ್ದಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ಆರಂಭಿಸುವ ಮಹಾನ್ ಆಸೆಯೊಂದಿಗೆ ನವದೆಹಲಿಗೆ ಆಗಮಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಭ್ರಮನಿರಸಗೊಂಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಆರಂಭಿಸುವ ಬಗ್ಗೆ ಬಿಸಿಸಿಐ ತೋರಿದ ನಿರುತ್ಸಾಹದಿಂದ ತಮಗೆ ಆಶಾಭಂಗವಾಗಿದೆ ಎಂದು ಹೇಳಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ``ಭಾರತಕ್ಕೆ ನಾನು ಮಾತುಕತೆಗಾಗಿ ಆಗಮಿಸಿ, ಸುಮಾರು 48 ಗಂಟೆಗಳು ಕಳೆದಿವೆ. ಆದರೆ, ಈವರೆಗೂ ಒಂದೇ ಒಂದು ಅಧಿಕೃತ ಸಭೆ ನಡೆದಿಲ್ಲ. ಮಂಗಳವಾರ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹಾಗೂ ಇತರ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ.
ಅಲ್ಲಿ ನಾವೆಲ್ಲರೂ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡೆವಷ್ಟೇ. ಸರಣಿ ಸಂಬಂಧ ರಾಜೀವ್ ಶುಕ್ಲಾ ಜತೆಗೆ ನಡೆಸಿದ ಮಾತುಕತೆಯೂ ಯಾವುದೇ ಫಲ ನೀಡಲಿಲ್ಲ. ಈ ಎಲ್ಲ ಬೆಳವಣಿಗೆಗಳು ಬೇಸರ ತರಿಸಿವೆ'' ಎಂದರು.
ಟಿ20 ವಿಶ್ವಕಪ್ ಬಹಿಷ್ಕಾರವಿಲ್ಲ
ಭಾರತ ವಿರುದ್ಧದ ದ್ವಿಪಕ್ಷೀಯ ಸರಣಿ ನಡೆಯದಿದ್ದರೆ, ಪಾಕಿಸ್ತಾನ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ವದಂತಿಗಳಿಗೆ ಶಹರ್ಯಾರ್ ಇದೇ ಸಂದರ್ಭದಲ್ಲಿ ಖಾನ್ ತೆರೆ ಎಳೆದರು.
ಈ ಬಗ್ಗೆ, ಪ್ರತಿಕ್ರಿಯಿಸಿರುವ ಅವರು, ``ದ್ವಿಪಕ್ಷೀಯ ಸರಣಿಯನ್ನೇ ನೆಪವಾಗಿಟ್ಟುಕೊಂಡು ಟಿ20 ವಿಶ್ವಕಪ್‍ನಿಂದ ದೂರ ಉಳಿಯುವ ಕುರಿತಂತೆ ಯಾವುದೇ ವಿಚಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿಲ್ಲ'' ಎಂದು ಅವರು ತಿಳಿಸಿದ್ದಾರೆ.