ಬೆಳಗಾವಿ, ಮಂಗಳೂರು ನಡುವೆ ಮೊದಲ ಕಾದಾಟ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ)ಯ ಮಹತ್ವಾಕಾಂಕ್ಷೆಯ, ಯುವ ಪ್ರತಿಭೆಗಳಿಗೆ ಮಹಾನ್ ವೇದಿಕೆಯಾಗಿರುವ ಕರ್ನಾಟಕ ಪ್ರೀಮಿಯರ್ ಲೀಗ್ ನ ನಾಲ್ಕನೇ ಆವೃತ್ತಿಗೆ ಶ್ರಣಗಣನೆ ಆರಂಭವಾಗಿದ್ದು..
ಕೆಪಿಎಲ್ ಟೂರ್ನಿ (ಸಂಗ್ರಹ ಚಿತ್ರ)
ಕೆಪಿಎಲ್ ಟೂರ್ನಿ (ಸಂಗ್ರಹ ಚಿತ್ರ)

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ)ಯ ಮಹತ್ವಾಕಾಂಕ್ಷೆಯ, ಯುವ ಪ್ರತಿಭೆಗಳಿಗೆ ಮಹಾನ್ ವೇದಿಕೆಯಾಗಿರುವ ಕರ್ನಾಟಕ ಪ್ರೀಮಿಯರ್ ಲೀಗ್ ನ ನಾಲ್ಕನೇ ಆವೃತ್ತಿಗೆ  ಶ್ರಣಗಣನೆ ಆರಂಭವಾಗಿದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಕಳೆದ ಸಾಲಿನ ರನ್ನರ್‍ಅಪ್ ಬೆಳಗಾವಿ ಪ್ಯಾಂಥರ್ಸ್ ಹಾಗೂ ಎರಡನೇ ಆವೃತ್ತಿಯಲ್ಲಿನ ಚಾಂಪಿಯನ್ ಮಂಗಳೂರು ಯುನೈಟೆಡ್ ಸೆಣಸಾಡಲಿವೆ.

ಇಲ್ಲಿನ ರಾಜನಗರದ ಕೆಎಸ್‍ಸಿಎ ಕ್ರೀಡಾಂಗಣದಲ್ಲಿ ನಡಯಲಿರುವ ಟೂರ್ನಿಯ ಮೊದಲ ಹಂತಕ್ಕೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆದಿದ್ದು, ದಿನದ ಎರಡನೇ ಪಂದ್ಯದಲ್ಲಿ ಹಾಲಿ  ಚಾಂಪಿಯನ್ ಮೈಸೂರು ವಾರಿಯರ್ಸ್ ಹಾಗೂ ಟೂರ್ನಿಗೆ ಪಾದಾರ್ಪಣೆ ಮಾಡಿರುವ ಶಿವಮೊಗ್ಗ ತಂಡಗಳು ಸೆಣಸಲಿವೆ. ಟೂರ್ನಿಯಲ್ಲಿ ಎಂಟು ತಂಡಗಳು ಸೆಣಸುತ್ತಿದ್ದು, ಮೊದಲ ಹಂತದ  ಪಂದ್ಯಗಳು ಹುಬ್ಬಳ್ಳಿಯಲ್ಲಿ 3ರಿಂದ 10ರವರೆಗೆ ಜರುಗಲಿದ್ದರೆ, ಎರಡನೇ ಹಾಗೂ ಕೊನೇ ಹಂತದ ಪಂದ್ಯಗಳು ಮೈಸೂರಿನಲ್ಲಿ ಸೆ. 12ರಿಂದ ಶುರುವಾಗಿ 20ನಡೆಯಲಿರುವ  ಫೈನಲ್ ನೊಂದಿಗೆ ಟೂರ್ನಿಗೆ ತೆರೆಬೀಳಲಿದೆ.

ಮಂಗಳವಾರವೇ ಎರಡು ತಂಡಗಳ ಆಟಗಾರರು ಕೆಎಸ್‍ಸಿಎ ಹಾಗೂ ದೇಶಪಾಂಡೆ ನಗರದ ಜಿಮ್ ಖಾನಾ ಮೈದಾನದಲ್ಲಿ ಸಾಕಷ್ಟು ಕಸರತ್ತು ನಡೆಸಿದರು. ವಾರದಿಂದ ಬೀಡು ಬಿಟ್ಟಿರುವ  ಅತಿಥೇಯ ಹುಬ್ಬಳ್ಳಿ ಟೈಗರ್ಸ್ ತಂಡ ಪ್ರಶಸ್ತಿ ಪಡೆಯಲು ಹರಸಾಹಸ ಪಡುತ್ತಿದೆ. ಕಳೆದ ಬಾರಿ ಕೆಪಿಎಲ್ ಟೂರ್ನಿಯಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಸವಿದಿದ್ದ ಉತ್ತರ ಕರ್ನಾಟಕದ  ಜನರಿಗೆ ಈ ಬಾರಿ ಕೆಎಸ್‍ಸಿಎ ಭರ್ಜರಿ ಗಿಫ್ಟ್ ನೀಡಿದೆ. ಉದ್ಘಾಟನಾ ಪಂದ್ಯ ಸಹಿತ ಲೀಗ್ ಹಂತದ ಒಟ್ಟು 16 ಪಂದ್ಯಗಳನ್ನು ಸವಿಯುವ ಅವಕಾಶ ಉ.ಕ. ಭಾಗದ ಜನ ಪಡೆದಿದ್ದಾರೆ.  ಕೆಎಸ್‍ಸಿಎ ಕಳೆದ 20 ದಿನಗಳಿಂದ 50ಕ್ಕೂ ಸಿಬ್ಬಂದಿ ನೆರವಿನೊಂದಿಗೆ ಪಿಚ್, ವೀಕ್ಷಕ ಗ್ಯಾಲರಿ, ಪೆವಿಲಿಯನ್, ಲೈಟ್ ಗಳನ್ನು ಸಿದ್ಧಪಡಿಸಿದ್ದಾರೆ. ಕ್ರಿಕೆಟ್ ಬೆಳವಣಿಗೆಗಾಗಿ ಧಾರವಾಡ ವಲಯದ ಹುಬ್ಬಳ್ಳಿ ಮೈದಾನಕ್ಕೆ ಕೆಎಸ್ ಸಿಎ ಈಗಾಗಲೇ ರು.25 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಇಂದು ಸ್ಟುವರ್ಟ್ ಬಿನ್ನಿ ಆಗಮನ
ಶ್ರೀಲಂಕಾ ಪ್ರವಾಸ ಮುಗಿಸಿ ಗೆಲುವಿನೊಂದಿಗೆ ಮರಳಿದ ಭಾರತ ಟೆಸ್ಟ್ ತಂಡದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ, ಶಿವಮೊಗ್ಗ ತಂಡವನ್ನು ಗುರುವಾರ ಸೇರಿಕೊಳ್ಳಲಿದ್ದಾರೆ. ಉಳಿದಂತೆ ಎಲ್ಲ  ತಂಡದ ಸದಸ್ಯರು ಬುಧವಾರವೇ ತಮ್ಮ ತಮ್ಮ ತಂಡಗಳನ್ನು ಸೇರಿಕೊಂಡಿದ್ದಾರೆ. ಕರ್ನಾಟಕದ ಪ್ರಮುಖ ಕ್ರಿಕೆಟಿಗರು ಏಳು ತಂಡಗಳಲ್ಲಿ ಸಮಾನವಾಗಿ ವಿಂಗಡಿಸಿ ಹೋಗಿದ್ದರೆ, ಎಂಟನೇ  ತಂಡವಾಗಿರುವ ರಾಕ್‍ಸ್ಟಾರ್ಸ್ ನಲ್ಲಿ ವೆಂಕಟೇಶ್ ಪ್ರಸಾದ್‍ರಂತಹ ಭಾರತ ತಂಡದ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಿರುವು ದು ಟೂರ್ನಿಗೆ ಮಹತ್ವ ತಂದುಕೊಟ್ಟಿದೆ. "ಕೆಲ ಉತ್ತಮ ಆಲ್  ರೌಂಡರ್ ಗಳನ್ನು ನಮ್ಮ ತಂಡ ಬಲಿಷ್ಠವಾಗಿದೆ. ಆದರೆ ಪಂದ್ಯಕ್ಕೆ ಅಂತಿಮ ಎಲೆವನ್ ಆಟಗಾರರನ್ನು ಆಯ್ಕೆಮಾಡುವ ಸಂದರ್ಭ ಮಾತ್ರ ಪ್ರತೀ ಬಾರಿಯೂ ಕಷ್ಟಕರ'' ಎಂದು ಪಂದ್ಯದ ಮುನ್ನಾ  ದಿನ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ  ಬ್ಯಾಟಿಂಗ್ ಕೋಚ್ ಆಗಿರುವ ಜೆ. ಅರುಣ್ ಕುಮಾರ್ ತಿಳಿಸಿದರು. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ  ಶುಭಾರಂಭ ಮಾಡುವ ವಿಶ್ವಾವನ್ನು ನಾಯಕ ವಿನಯ್ ಕುಮಾರ್ ವ್ಯಕ್ತಪಡಿಸಿದರು.

ವಿಶ್ವಾಸದಲ್ಲಿ ಮನೀಷ್ ಬಳಗ
ಇನ್ನು ಕಳೆದ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆದ ಮೈಸೂರು ವಾರಿಯರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡುವ ಗುರಿ ಹೊತ್ತಿದೆ. ಕಳೆದ ಬಾರಿ  ತವರಿನ ಅಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಾರಿಯರ್ಸ್ ಪಡೆ, ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಮಣಿಸಿತ್ತು. ಇತ್ತ ಲೀಗ್ ಹಂತದಲ್ಲಿ ಬಿಜಾಪುರ ಬುಲ್ಸ್ ತಂಡ ಅಗ್ರ ಸ್ಥಾನ  ಪಡೆದಿತ್ತಾದರೂ ಸೆಮಿಫೈನಲ್ ಪಂದ್ಯದಲ್ಲಿ ಬೆಳಗಾವಿ ವಿರುದ್ಧ ಮುಗ್ಗರಿಸಿತ್ತು. ಇನ್ನು ಮೈಸೂರು ವಾರಿಯರ್ಸ್ ಉಪಾಂತ್ಯದ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ ಗೆಲುವು  ದಾಖಲಿಸಿತ್ತು. ಈ ಬಾರಿಯೂ ಮೈಸೂರು ವಾರಿಯರ್ಸ್ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿಯಲಿದ್ದು, ಮನೀಶ್ ಪಾಂಡೆ ಸಾರಥ್ಯದ ವಾರಿಯರ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ಸಂಕಲ್ಪ  ತೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com