
ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 8ನೇ ಶ್ರೇಯಾಂಕದ ಹಾಗೂ 14 ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ರಾಫೆಲ್ ನಡಾಲ್, ಅರ್ಜೆಂಟೀನಾದ ಡೀಗೋ ಸ್ವಾರ್ಟ್ಜ್‌ಮನ್‌ರನ್ನು 7-6 (7), 6-3, 7-5ರಿಂದ ಸೋಲಿಸಿ ಮುನ್ನಡೆದರು.
2005ರಿಂದ ವರ್ಷದ ನಾಲ್ಕೂ ಗ್ರಾಂಡ್ ಸ್ಲಾಂ ಟೂರ್ನಿ ಆಡಲು ಆರಂಭಿಸಿದ ನಡಾಲ್ ಬಳಿಕ ಯಾವ ವರ್ಷವೂ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲದೆ ಟೆನಿಸ್ ಋತು ಮುಗಿಸಿದ್ದ ದಾಖಲೆಯೇ ಇಲ್ಲ. ಈ ಭಾರಿ ನಡಾಲ್ ಗೆ ಈ ಅಪಮಾನ ಎದುರಾಗುವ ಭೀತಿ ಎದುರಾಗಿದ್ದು, ಗ್ರಾಂಡ್ ಸ್ಲಾಂ ಗೆಲ್ಲದ ವರ್ಷ ಎನ್ನುವ ಅಪಮಾನ ತಪ್ಪಿಸಿಕೊಳ್ಳಲು ನಡಾಲ್‌ಗೆ ಈ ವರ್ಷ ಯುಎಸ್ ಓಪನ್ ಕೊನೇ ಅವಕಾಶವಾಗಿದೆ. ನಡಾಲ್ ಮುಂದಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯೋ ಪ್ರೊಗ್ನಿನಿ ವಿರುದ್ಧ ಆಡಲಿದ್ದಾರೆ. ವಿಶ್ವ ನಂ.1 ನೊವಾಕ್ ಜೋಕೊವಿಕ್, ಆಸ್ಟ್ರಿಯಾದ ಆಂಡ್ರೆಸ್ ಹೈಡೆರ್ ಮುರೆರ್ ವಿರುದ್ಧ 6-4, 6-1, 6-2 ರಿಂದ ಗೆಲುವು ಸಾಧಿಸಿ 3ನೇ ಸುತ್ತು ಪ್ರವೇಶಿಸಿದರು. ಆಂಡ್ರೆಸ್ ಸೆಪ್ಪಿ 3ನೇ ಸುತ್ತಿನಲ್ಲಿ ಜೋಕೊವಿಕ್‌ಗೆ ಎದುರಾಳಿಯಾಗಿದ್ದಾರೆ. ಮಿಲೋಸ್ ರಾವೋನಿಕ್, ಜೋ ವಿಲ್ರೆಡ್ ಸೋಂಗ ತೃತೀಯ ಸುತ್ತಿಗೇರಿದ ಇತರ ಪ್ರಮುಖರು.
ಮುಗುರುಜಾ ನಿರ್ಗಮನ
ಹಾಲಿ ವಿಂಬಲ್ಡನ್ ರನ್ನರ್ ಅಪ್ ಗಾರ್ಬಿನ್ ಮುಗುರುಜಾ ಬ್ರಿಟನ್‌ನ ವಿಶ್ವ ನಂ.96ನೇ ಆಟಗಾರ್ತಿ ಜೊಹಾನ್ನಾ ಕೊಂಟಾ ವಿರುದ್ಧ ಸೋಲಿನ ಶಾಕ್ ಅನುಭವಿಸಿದರು. ಪಂದ್ಯದಲ್ಲಿ ಪರದಾಡಿದ ಮುಗುರುಜಾ 6-7(7-4),7-6(7-4),2-6 ಸೆಟ್‌ಗಳಿಂದ ಕೊಂಟಾ ವಿರುದ್ಧ ಪರಾಭವಗೊಂಡು 2ನೇ ಸುತ್ತಿನಲ್ಲೇ ನಿರ್ಗಮಿಸಿದರು.
ಅಚ್ಚರಿಯ ಫಲಿತಾಂಶಗಳು
ಟೂರ್ನಿಯ 3ನೇ ದಿನದ ಅಚ್ಚರಿಯ ಫಲಿತಾಂಶ ಪುರುಷರ ಸಿಂಗಲ್ಸ್ ಕಣದಲ್ಲಿ ದಾಖಲಾಯಿತು. ಕಜಾಕಿಸ್ತಾನದ ಮಿಖಾಯಿಲ್ ಕುಕುಶ್ಕಿನ್ 6-3, 7-6 (7), 2-6, 4-6, 6-4 ರಿಂದ ಡಿಮಿಟ್ರೋವ್‌ರನ್ನು ಸೋಲಿಸಿದರೆ, ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಬಾಬ್ ಹಾಗೂ ಮೈಕ್ ಬ್ರಿಯಾನ್ ಜೋಡಿ ಆಘಾತ ಎದುರಿಸಿತು. ಅಮೆರಿಕದವರೇ ಆದ ಸ್ಟೀವ್ ಜಾನ್ಸನ್ ಹಾಗೂ ಸ್ಯಾಮ್ ಕ್ವೆರ್ರಿ ಜೋಡಿ 7-6(7), 5-7, 6-3 ರಿಂದ ಅಗ್ರ ಶ್ರೇಯಾಂಕದ ಬ್ರಿಯಾನ್ ಬ್ರದರ್ಸ್ ಜೋಡಿಯನ್ನು ಮಣಿಸಿತು.
ಪೇಸ್-ಹಿಂಗಿಸ್ ಶುಭಾರಂಭ
ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿತು. 4ನೇ ಶ್ರೇಯಾಂಕದ ಇಂಡೋ-ಸ್ವಿಸ್ ಜೋಡಿ ಕೇವಲ 46 ನಿಮಿಷದ ಪಂದ್ಯದಲ್ಲಿ ಆತಿಥೇಯ ದೇಶದ ಟೇಲರ್ ಹ್ಯಾರಿ ಫಿರಲಿಲುಯ್ ಜೋಡಿಯನ್ನು ಮಣಿಸಿತು.
Advertisement