
ನ್ಯೂಯಾರ್ಕ್: ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಅಮೆರಿಕದ ಸೆರೇನಾ ವಿಲಿಯಮ್ಸ್ ವರ್ಷದ 50ನೇ ಪಂದ್ಯದ ಗೆಲುವಿನೊಂದಿಗೆ ಟೂರ್ನಿಯ 3ನೇ ಸುತ್ತು ಪ್ರವೇಶಿಸಿದ್ದಾರೆ.
ಜರ್ಮನಿಯ ಸ್ಟೆಫಿಗ್ರಾಫ್ (1988) ಬಳಿಕ ಕ್ಯಾಲೆಂಡರ್ ಗ್ರಾಂಡ್ ಸ್ಲಾಂ ಸಾಧಿಸಿದ ಮೊದಲ ಆಟಗಾರ್ತಿ ಎನ್ನುವ ದಾಖಲೆ ಬರೆಯುವ ಹಂಬಲದಲ್ಲಿರುವ ಸೆರೇನಾ 7-6 (7), 6-3 ಸೆಟ್‌ಗಳಿಂದ ಅರ್ಹತಾ ಸುತ್ತಿನಿಂದ ಬಂದ ಆಟಗಾರ್ತಿ ನೆದರ್‌ಲ್ಯಾಂಡ್ಸ್‌ನ ಕಿಕಿ ಬಾರ್ತೆನ್ಸ್‌ರನ್ನು ಸೋಲಿಸಿದರು. ಸೆರೇನಾ ವಿಲಿಯಮ್ಸ್ ಈ ವರ್ಷ ಆಡಿದ 52 ಪಂದ್ಯಗಳಲ್ಲಿ 50ನೇ ಗೆಲುವು ದಾಖಲಿಸಿದರು. ಮ್ಯಾಡ್ರಿಡ್ ಮಾಸ್ಟರ‍್ಸ್ ಸೆಮಿ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವ ಹಾಗೂ ರೋಜರ್ಸ್ ಕಪ್ ಸೆಮಿ ಫೈನಲ್‌ನಲ್ಲಿ ಬೆಲಿಂಡಾ ಬೆನ್ಸಿಕ್ ಮಾತ್ರ ಈ ವರ್ಷ ಸೆರೇನಾ ವಿರುದ್ಧ ಗೆಲುವು ಸಾಧಿಸಿದ ಆಟಗಾರ್ತಿಯರು.
ಪುರುಷರ ಸಿಂಗಲ್ಸ್‌ನಲ್ಲಿ ‘ಗ್ರಾಂಡ್ ಸ್ಲಾಂ ಗೆಲ್ಲದ ವರ್ಷದ ಅವಮಾನವನ್ನು ತಪ್ಪಿಸಿಕೊಳ್ಳುವ ಯತ್ನದಲ್ಲಿರುವ ರಾಫೆಲ್ ನಡಾಲ್ ತೃತೀಯ ಸುತ್ತಿಗೇರಿದ್ದಾರೆ. ಇನ್ನೊಂದೆಡೆ, ತಮ್ಮ ಪತ್ನಿಯಿಂದಲೇ ತರಬೇತಿ ಪಡೆಯುತ್ತಿರುವ ಕಜಾಕಿಸ್ತಾನದ ಆಟಗಾರ ಮಿಖಾಯಿಲ್ ಕುಕುಶ್ಕಿನ್ ಅಚ್ಚರಿಯ ಫಲಿತಾಂಶದಲ್ಲಿ ಬೇಬಿ ಫೆಡ್ ಖ್ಯಾತಿಯ 17ನೇ ಶ್ರೇಯಾಂಕದ ಆಟಗಾರ ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್‌ರನ್ನು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಬೌಚಾರ್ಡ್, ವೀನಸ್ ಜಯಭೇರಿ: 2 ಬಾರಿಯ ಚಾಂಪಿಯನ್ ಆಗಿರುವ ವೀನಸ್ ವಿಲಿಯಮ್ಸ್ 3 ಸೆಟ್‌ಗಳ ಕಠಿಣ ಹೋರಾಟದಲ್ಲಿ ತಮ್ಮದೇ ದೇಶದ ಇರಿನಾ ಫಾಲ್ಕೋನಿಯನ್ನು 6-3, 6-7(2), 6-2 ರಿಂದ ಮಣಿಸಿದರು. 21 ವರ್ಷದ ಕೆನಡ ಆಟಗಾರ್ತಿ ಎಗುನಿ ಬೌಚಾರ್ಡ್ 6-3, 6-7 (2), 6-3 ರಿಂದ ಸ್ಲೋವೆನಿಯಾದ ಪೊಲೊನಾ ಹೆರ್ಕಾಗ್ ವಿರುದ್ಧ ಜಯಿಸಿದರು. 19ನೇ ಶ್ರೇಯಾಂಕದ ಮ್ಯಾಡಿಸನ್ ಕೀಯ್ಸ್ 6-1, 6-2 ಟೆರೆಜಾ ಸ್ಮಿಟ್ಕೋವ ವಿರುದ್ದ ಜಯ ಸಾಧಿಸಿ ಮುನ್ನಡೆದರು. ಪೋಲೆಂಡ್‌ನ ಆಗ್ನೆಸ್ಕಾ ರಾಡ್ವಾಂಸ್ಕ 6-3, 6-2ರಿಂದ ಮಾಗ್ದಾ ಲಿನೆಟ್‌ರನ್ನು ಮಣಿಸಿದರು.
3ನೇ ಸುತ್ತಿಗೆ ಅಜರೆಂಕಾ, ಸಮಂತಾ: ಬೆಲಾರೆಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಹಾಗೂ ಆಸ್ಟ್ರೇಲಿಯಾದ ಸಮಂತಾ ಸ್ಟೋಸರ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ವಿಶ್ವ ನಂ.21 ಅಜರೆಂಕಾ 2ನೇ ಸುತ್ತಿನ ಪಂದ್ಯದಲ್ಲಿ 7-5, 6-4ರಿಂದ ಬೆಲ್ಜಿಯಂನ ಎನಿನಾ ವಿಕ್‌ಮೆಯರ್‌ರನ್ನು ಮಣಿಸಿದರು. ವಿಶ್ವ ನಂ.18 ಸಮಂತಾ, ರಷ್ಯಾದ ಎವಿಗಿನಿಯಾ ರೊಡಿನಾರನ್ನು 6-1, 6-1ರಿಂದ ಸುಲಭವಾಗಿ ಮಣಿಸಿದರು.
Advertisement