
ನವದೆಹಲಿ: ಪ್ರವಾಸಿ ಜೆಕ್ ಗಣರಾಜ್ಯ ಹಾಗೂ ಆತಿಥೇಯ ಭಾರತ ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯಾವಳಿಯ ಮೊದಲ ದಿನವೇ ಸಮಬಲದ ಕಾದಾಟ ಕಂಡುಬಂದಿದೆ. ಮುನ್ನಡೆಗಾಗಿ ಸೆ.19 ರಂದು ನಡೆಯಲಿರುವ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಮತ್ತೊಂದು ಸುತ್ತಿನ ಸೆಣೆಸಾಟ ಶುರುವಾಗಲಿದೆ.
ಇಲ್ಲಿನ ಆರ್.ಕೆ ಖನ್ನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮೊದಲ ದಿನದ ಮೊದಲ ಸಿಂಗಲ್ಸ್ ನಲ್ಲಿ ಯೂಕಿ ಭಾಂಬ್ರಿ ಸೋಲನುಭವಿಸಿ ಆಘಾತ ಅನುಭವಿಸಿದರು. ಇತ್ತೀಚೆಗಷ್ಟೆ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಜಯಭೇರಿ ಬಾರಿಸಿದ ಹುರುಪಿನಲ್ಲಿದ್ದ ಈ ಯುವ ಆಟಗಾರ ವಿಶ್ವದ 85 ನೇ ಶ್ರೇಯಾಂಕಿತ ಲೂಕಾಸ್ ರೋಸೋಲ್ ವಿರುದ್ಧ 2 -6 , 1 -6 , 5 -7 ಸೆಟ್ ಗಳಿಂದ ಹಿನ್ನಡೆ ಅನುಭವಿಸಿದರು.
125 ನೇ ಶ್ರೇಯಾಂಕಿತ ಯೂಕಿ ಭಾಂಬ್ರಿ ವಿರುದ್ಧ ಆಕ್ರಮಣಕಾರಿ ಆಟವಾಡಿದ ರೋಸೋಲ್, ಕೊನೆಯ ಸೆಟ್ ಒಂದನ್ನು ಹೊರತುಪಡಿಸಿ ಮೊದಲೆರಡು ಸೆಟ್ ಗಳಲ್ಲಿ ಸುಲಭ ಗೆಲುವು ಪಡೆದರು. 31 ಡಿಗ್ರಿ ಸೆಲ್ಷಿಯಸ್ ತಾಪಮಾನದಿಂದ ಕೂಡಿದ್ದ ಕ್ರೀಡಾಂಗಣದಲ್ಲಿ ಒಂದು ತಾಸು ಹಾಗೂ 55 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಯೂಕಿ ನೇರ ಸೆಟ್ ಗಳಲ್ಲಿ ಪರಾಭವಗೊಂಡರು. ಇದು ಸಹಜವಾಗಿಯೇ ಜೆಕ್ ಗಣರಾಜ್ಯದ 1 -0 ಮುನ್ನಡೆಗೆ ಕಾರಣವಾಯಿತು.
Advertisement