
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. 122 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ರೈಸಿಂಗ್ ಪುಣೆ 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 126 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಆರಂಭಿಕರಾದ ಅಜಿಂಕ್ಯ ರಹಾನೆ ಭರ್ಜರಿ ಬ್ಯಾಟಿಂಗ್ ನಿಂದಾಗಿ 42 ಎಸೆತಗಳಲ್ಲಿ 66 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇನ್ನು ರಹಾನೆಗೆ ಸಾಥ್ ನೀಡಿದ ಡುಪ್ಲೆಸಿಸ್ 34 ರನ್ ಗಳಿಸಿ ಓಟಾದರು. ಬಳಿಕ ಬಂದ ಕೆವಿನ್ ಪೀಟರ್ಸೆನ್ ಹಾಗೂ ರಹಾನೆ ಜತೆಗೂಡಿ 2ನೇ ವಿಕೆಟ್‌ಗೆ 30 ಎಸೆತಗಳಲ್ಲಿ 48 ರನ್ ಗಳಿಸಿ 32 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಮುಂಬೈ ಪರ ಲೆಂಡ್ಲ್ ಸಿಮ್ಮನ್ಸ್ 8, ರೋಹಿತ್ ಶರ್ಮಾ 7, ಹಾರ್ದಿಕ್ ಪಾಂಡ್ಯಾ 9, ಜೋಸ್ ಬಟ್ಲರ್ 0, ರಾಯುಡು 22, ಪೊಲ್ಲಾರ್ಡ್ 1, ಶ್ರೇಯಸ್ 2, ವಿನಯ್ 12 ಹಾಗೂ ಹರ್ಭಜನ್ ಸಿಂಗ್ ಅಜೇಯ 45 ಹಾಗೂ ಮಿಚೆಲ್ ಮೆಕ್ಲೀನಘನ್ 2 ರನ್ ಗಳಿಸಿದ್ದಾರೆ.
ಪುಣೆ ಪರ ಇಶಾಂತ್ ಶರ್ಮಾ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರೆ, ರಜತ್ ಭಾಟಿಯಾ, ಎಂ. ಅಶ್ವಿನ್ ಹಾಗೂ ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
42 ಎಸೆತಗಳಲ್ಲಿ ಭರ್ಜರಿ 66 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಅಜಿಂಕ್ಯ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement