ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದ ಚೆಕಾಗೆ ಮಣ್ಣು ಮುಕ್ಕಿಸಿದ ವಿಜೇಂದರ್!

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದ್ದು, ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದು ಬೀಗುತ್ತಿದ್ದ ತಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಕೇವಲ ಮೂರೇ ಸುತ್ತಿನಲ್ಲಿ ಮಣಿಸಿದ್ದಾರೆ.
ಪಂದ್ಯ ಗೆದ್ದ ವಿಜಿ ಸಂಭ್ರಮ
ಪಂದ್ಯ ಗೆದ್ದ ವಿಜಿ ಸಂಭ್ರಮ

ನವದೆಹಲಿ: ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದ್ದು, ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದು ಬೀಗುತ್ತಿದ್ದ ತಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು  ಕೇವಲ ಮೂರೇ ಸುತ್ತಿನಲ್ಲಿ ಮಣಿಸಿದ್ದಾರೆ.

ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನೆರೆದಿದ್ದ ಭಾರಿ ಜನಸ್ತೋಮದ ನಡುವೆ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ 16 ವರ್ಷಗಳ ವೃತ್ತಿಪರ ಬಾಕ್ಸಿಂಗ್ ನ ಅನುಭವಿ ಚೆಕಾ, ವಿಜೇಂದರ್ ಆಕ್ರಮಣಕಾರಿ ಪಂಚ್​ ಗಳಿಗೆ ಶರಣಾದರು.  ಕೇವಲ ಮೂರು ಸುತ್ತುಗಳಲ್ಲೇ ವಿಜೇಂದರ್ ಪಂಚ್ ಗಳಿಗೆ ಸುಸ್ತಾದ ಚೆಕಾ ಮೂರನೇ ಸುತ್ತಿನ ಆರಂಭದಲ್ಲೇ ಪಂದ್ಯ ನಿಲ್ಲಿಸುವಂತೆ ರೆಫರಿಗೆ ಮನವಿ ಮಾಡುವುದರೊಂದಿಗೆ ಪಂದ್ಯದಲ್ಲಿ ವಿಜೇಂದರ್ ಜಯಶಾಲಿ ಎಂದು  ಘೋಷಿಸಲಾಯಿತು.

ಆ ಮೂಲಕ ಭಾರತ ವಿಜೇಂದರ್ ಸತತ 8ನೇ ಗೆಲುವಿನೊಂದಿಗೆ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್-ಮಿಡಲ್ವೇಟ್ ಚಾಂಪಿಯನ್​ಷಿಪ್ ಬೆಲ್ಟ್ ಅನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಸುದೀರ್ಘ 10 ಸುತ್ತುಗಳ ಪಂದ್ಯವನ್ನು  ತಾಳ್ಮೆಯೊಂದಿಗೆ ಆರಂಭಿಸಿದ ವಿಜಿ ಮೊದಲ ಸುತ್ತಿನಲ್ಲಿ ಹೆಚ್ಚು ರಕ್ಷಣಾತ್ಮಕವಾಗಿ ಆಡಿ ಚೆಕಾಗೆ ಮೂರು ಪಂಚ್ ಕೊಟ್ಟು ಮೇಲುಗೈ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ತಾಂಜಾನಿಯಾ ಬಾಕ್ಸರ್ ಚೆಕಾ ಆಕ್ರಮಣಕಾರಿಯಾಗಿ ಪಂಚ್  ನೀಡಲು ಪ್ರಯತ್ನಿಸಿದರೂ ತನಗಿಂತ ಎತ್ತರವಿದ್ದ ವಿಜಿಗೆ ಹೊಡೆಯಲು ಸಾಧ್ಯವಾಗದೇ ಕೇವಲ ಮೂರೇ ಪಂಚ್ ನೀಡಿ ವಿಜೇಂದರ್ ಸಿಂಗ್ ರಿಂದ ಬರೋಬ್ಬರಿ 7 ಪಂಚ್ ಪಡೆದರು.

ಮೂರನೇ ಸುತ್ತಿನಲ್ಲಿ ಆರಂಭದಲ್ಲೇ ಚೆಕಾಗೆ ನಾಕೌಟ್ ಪಂಚ್ ನೀಡಿದ ವಿಜಿ ಬಹುತೇಕ ಗೆಲುವನ್ನು ಖಚಿತಪಡಿಸಿಕೊಂಡಿದ್ದರು. ಕಾರಣ 3ನೇ ಸುತ್ತು ಆರಂಭವಾದ ಕೇವಲ 1 ನಿಮಿಷ 56 ಸೆಕೆಂಡ್​ನಲ್ಲೇ ಚೆಕಾ, ವಿಜೇಂದರ್ ಪಂಚ್​  ಗೆ ಸುಸ್ತಾಗಿ ರೆಫರಿಯಲ್ಲಿ ಪಂದ್ಯ ನಿಲ್ಲಿಸುವಂತೆ ಕೇಳಿಕೊಂಡರು. ಆಗ ರೆಫರಿ ವಿಜೇಂದರ್ ಸಿಂಗ್ ವಿಜಯಶಾಲಿ ಎಂದು ಘೋಷಿಸುವುದರೊಂದಿಗೆ ಮೈದಾನದಲ್ಲಿ ಪ್ರೇಕ್ಷಕರ ಚಪ್ಪಾಳೆ ಮತ್ತು ಶಿಳ್ಳೆ ಮುಗಿಲು ಮುಟ್ಟಿತ್ತು.

ವಿಜಿ ಪದಕ ತನಗೆ ಲೆಕ್ಕವೇ ಇಲ್ಲ, ಆತನನ್ನು ರಿಂಗ್ ನಲ್ಲೇ ಕೊಲ್ಲುತ್ತೇನೆ ಎಂದಿದ್ದ ಚೆಕಾ
ಇನ್ನು ಪಂದ್ಯಕ್ಕೂ ಮುನ್ನ ನಡೆದ ಜಂಟಿ ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ತಾಂಜೇನಿಯಾ ಬಾಕ್ಸರ್ ಫ್ರಾನ್ಸಿಸ್ ಚೆಕಾ, ವಿಜೇಂದರ್ ಗೆದ್ದ ಒಲಿಂಪಿಕ್ಸ್ ಪದಕ ತನಗೆ ಲೆಕ್ಕವೇ ಇಲ್ಲ. ನಾನೇಕೆ ವಿಶ್ವ  ಚಾಂಪಿಯನ್ ಎನ್ನುವುದು ಶನಿವಾರದ ಪಂದ್ಯದಲ್ಲಿ ವಿಜೇಂದರ್ ​ಗೆ ಗೊತ್ತಾಗಲಿದೆ. ನನ್ನೆದುರು ಫೈಟ್ ಮಾಡಲು ವಿಜೇಂದರ್​ ನನ್ನು ಭಾರತ ಆರಿಸಿದ್ದಕ್ಕೆ ವ್ಯಥೆ ಪಡಬೇಕು ಹಾಗೆ ಮಾಡುತ್ತೇನೆ. ಇದಕ್ಕಿಂತ ದೊಡ್ಡ ಫೈಟ್​ ಅನ್ನು  ಫೈಟರ್​ಗಳನ್ನು ನಾನು ಎದುರಿಸಿದ್ದೇನೆ. ವಿಶ್ವ ಪ್ರಶಸ್ತಿಗಳನ್ನು ಗೆದ್ದ ಅಮೆರಿಕದ ಬಾಕ್ಸರ್​ ಗಳನ್ನು ಸೋಲಿಸಿ ಬಂದಿದ್ದೇನೆ. ರಿಂಗ್​ನಲ್ಲೇ ಆತನನ್ನು ಕೊಲ್ಲುತ್ತೇನೆ ಎಂದು ಚೆಕಾ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com