ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಮೆಕಲಮ್

ಹಾಗ್ಲೀ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 54 ಬಾಲ್‌ಗಳಲ್ಲಿ ಸೆಂಚುರಿ ಬಾರಿಸಿ ಮೆಕಲಮ್ ...
ಬ್ರಾಂಡನ್ ಮೆಕೆಲಮ್
ಬ್ರಾಂಡನ್ ಮೆಕೆಲಮ್
Updated on
ಕ್ರೈಸ್ಟ್ ಚರ್ಚ್: ವಿದಾಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್  ತಂಡದ ನಾಯಕ ಬ್ರಾಂಡನ್ ಮೆಕೆಲಮ್ ಶನಿವಾರ ಅತೀ ವೇಗದ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ತಮ್ಮ ತಾಯ್ನಾಡಿನ ಹಾಗ್ಲೀ ಓವಲ್ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 54 ಬಾಲ್‌ಗಳಲ್ಲಿ ಸೆಂಚುರಿ ಬಾರಿಸಿ ಮೆಕಲಮ್ ಈ ದಾಖಲೆ ನಿರ್ಮಿಸಿದ್ದಾರೆ. 
ಈ ಶತಕ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವ್ ರಿಚಾರ್ಡ್ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಅವರ ದಾಖಲೆಯನ್ನು ಮೆಕಲಮ್ ಮುರಿದಿದ್ದಾರೆ. 
1985ರಲ್ಲಿ ಆಂಟಿಗ್ವೇಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಿಚಾರ್ಡ್ ವೇಗದ ಶತಕ ದಾಖಲಿಸಿದ್ದರೆ, 2014ರಲ್ಲಿ ಅಬುದಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಮಿಸ್ಬಾ ವೇಗದ ಸೆಂಚುರಿ ದಾಖಲಿಸಿದ್ದರು. 
79 ಬಾಲ್‌ಗಳಲ್ಲಿ 21 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿ 145 ರನ್ ಗಳಿಸಿದ್ದ ಮೆಕಲಮ್  ಪಾಟಿನ್‌ಸನ್ ಬೌಲ್‌ಗೆ ವಿಕೆಟ್ ಕಳೆದುಕೊಂಡರು.
ಆದರೆ ನಿರ್ಣಾಯಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್ 370 ರನ್‌ ಗಳಿಸಿ ಆಲೌಟ್ ಆಯಿತು. ಆರಂಭದಲ್ಲಿಯೇ ಬ್ಯಾಟಿಂಗ್ ಕುಸಿತ ಕಂಡ ನಂತರ  ಐದನೇ ವಿಕೆಟ್ ಜತೆಯಾಟದಲ್ಲಿ ಮೆಕೆಲಮ್ ಮತ್ತು ಕೋರಿ ಆ್ಯಂಡರ್‌ಸನ್ 179 ರನ್ ಗಳಿಸಿ ಕಿವೀಸ್ ಸ್ಕೋರ್ 200 ದಾಟುವಂತೆ ಮಾಡಿದರು. 66 ಬಾಲ್‌ಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿ 72 ರನ್ ಗಳಿಸಿದ್ದ ಆ್ಯಂಡರ್‌ಸನ್  ನಾಥನ್ ಲಿಯೋನ್ ಬಾಲ್‌ಗೆ ವಿಕೆಟ್ ಒಪ್ಪಿಸಿದರು . ಕೊನೆಯ ವಿಕೆಟ್ ನಲ್ಲಿ ಟೆಂಡ್ ಬೋಲ್ಟ್ ಜತೆಗೆ ವಾಟ್ಲಿಂಗ್ ನಡೆಸಿದ ಸಮಯೋಜಿತ ಆಟ ಕಿವೀಸ್ ಸ್ಕೋರ್ 370 ಆಗುವಂತೆ ಮಾಡಿತು. ವಾಟ್ಲಿಂಗ್ 57 ಬಾಲ್ ನಲ್ಲಿ 58 ರನ್ ಗಳಿಸಿ ಔಟಾದರು.  ಬೋಲ್ಟ್ 14 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾ ಪರ ಲಿಯೋನ್ 3, ಹೇಜಲ್ವುಡ್ , ಪಾಟಿನ್‌ಸನ್, ಬೆರ್ಡ್ ಮೊದಲಾದವರು ತಲಾ ಎರಡು ವಿಕೆಟ್ ಮತ್ತು ಮಾರ್ಷ್ 1 ವಿಕೆಟ್‌ಗಳಿಸಿದ್ದಾರೆ.
ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ನ್ಯೂಜಿಲ್ಯಾಂಡ್ ನಾಯಕ ಮೆಕಲಮ್ ಪಾತ್ರರಾದರು. ಪಂದ್ಯ ಆರಂಭವಾಗುವ ಮುನ್ನ 100 ಸಿಕ್ಸರ್ ನ ದಾಖಲೆಯಲ್ಲಿ ಮೆಕಲಮ್ ಮತ್ತು ಆಸ್ಟ್ರೇಲಿಯಾದ ಆದಂ ಗಿಲ್‌ಕ್ರಿಸ್ಟ್ ಸಮ ಸಮರಾಗಿದ್ದರು. ಆದರೆ ಇಂದು ಬಾರಿಸಿದ 6 ಸಿಕ್ಸರ್‌ಗಳಿಂದಾಗಿ ಮೆಕಲಮ್  106 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು. ಮೆಕಮ್ ಅವರ ಸತತವಾದ 101ನೇ ಟೆಸ್ಟ್ ಪಂದ್ಯ ಇದಾಗಿದೆ. ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ಸತತವಾಗಿ ಟೆಸ್ಟ್‌ಗಳನ್ನು ಆಡಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮೆಕಲಮ್ ಈ ಮೊದಲೇ ಪಾತ್ರವಾಗಿದ್ದರು.
ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಗೆಲವು ಸಾಧಿಸಿದ ಆಸ್ಟ್ರೇಲಿಯಾ  ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್‌ನಲ್ಲಿ ಡ್ರಾ ಆದರೂ ರ್ಯಾಕಿಂಗ್ ಮೂಲಕ ಅವರಿಗೆ ಮೊದಲ ಸ್ಥಾನವೇ ಲಭಿಸಲಿದೆ. ಇತ್ತ ನ್ಯೂಜಿಲ್ಯಾಂಡ್ ತಮ್ಮ ನಾಯಕನ ವಿದಾಯ ಪಂದ್ಯದಲ್ಲಿ ವಿಜಯ ಸಾಧಿಸಿಯೇ ತೀರುವೆವು ಎಂಬ ಹಠದಲ್ಲಿ ಪ್ರಯತ್ನ ಮುಂದುವರಿಸಿದೆ.
ಸದ್ಯ, 20 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಆಸ್ಟೇಲಿಯಾ 57 ರನ್‌ಗಳನ್ನು ಗಳಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com