ನ್ಯಾ. ಲೋಧಾ ವರದಿ ಹಿನ್ನೆಲೆ: ಅಧೀನ ಸಂಸ್ಥೆಗಳಿಗೆ ಬಿಸಿಸಿಐ ಮಹತ್ವದ ಸೂಚನೆ

ಜ.31ರೊಳಗೆ ವರದಿ ಸಲ್ಲಿಸುವಂತೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಪತ್ರ, ಕಾದು ನೋಡುವ ತಂತ್ರಕ್ಕೆ ಮುಂದಾದ ಬಿಸಿಎ ಕಾರ್ಯದರ್ಶಿ ಆದಿತ್ಯ ವರ್ಮಾ...
ಬಿಸಿಸಿಐ
ಬಿಸಿಸಿಐ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಡಳಿತ ಸುಧಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯತ್ವ ಸಮಿತಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಿ ರುವ ಹಲವು ಮಹತ್ವಪೂರ್ಣ ಶಿಫಾರಸುಗಳಿಂದ ತಲ್ಲಣಗೊಂಡಿರುವ ಬಿಸಿಸಿಐ, ತನ್ನ ಅಧೀನ ಸಂಸ್ಥೆ ಗಳಿಗೆ ಶಿಫಾರಸಿನ ಅಂಶಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಇದೇ ತಿಂಗಳು 31ರೊಳಗೆ ತನಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಎಲ್ಲಾ ಅಧೀನ ಕ್ರಿಕೆಟ್ ಸಂಸ್ಥೆಗಳೂ ಪತ್ರ ಬರೆದಿದ್ದು, 'ಈಗಾಗಲೇ ಲೋಧಾ ಸಮಿತಿಯ ಶಿಫಾರಸುಗಳ ಕುರಿತಾಗಿ ನಿಮಗೆ ಚೆನ್ನಾಗಿ ಗೊತ್ತಿದೆ. ವರದಿಯಲ್ಲಿನ ಅಂಶಗಳ ಕುರಿತು ಕಾನೂನು ತಜ್ಞರ ಸಭೆಯನ್ನು ಕರೆದು ಎಲ್ಲ ನಿಟ್ಟಿನಿಂದಲೂ ಚರ್ಚಿಸಿ, ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ವರದಿಯನ್ನು ಮಾಸಾಂತ್ಯದೊಳಗೆ ಸಲ್ಲಿಸಬೇಕು'' ಎಂದು ಮುಂತಿಳಿಸಿದ್ದಾರೆ.

ಅಂದಹಾಗೆ ಠಾಕೂರ್ ಬರೆದಿರುವ ಪತ್ರದೊಂದಿಗೆ ಲೋಧಾ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರತಿಯನ್ನೂ ಲಗತ್ತಿಸಲಾಗಿದೆ. 'ಶಿಫಾರಸಿನಲ್ಲಿರುವ ಕೆಲವೊಂದು ಅಂಶಗಳು ತಿಕ್ಕಾಟಕ್ಕೆ ದಾರಿ ಮಾಡಿಕೊಡುವಂಥದ್ದಾಗಿದೆ. ಒಂದು ರಾಜ್ಯ, ಒಂದು ಮತ, ಆಡಳಿತಾಧಿಕಾರಿಗಳ ವಯೋಮಿತಿಯ ನಿರ್ಬಂಧ ಇತ್ಯಾದಿ ಅಂಶಗಳು ಚರ್ಚಿಸಲರ್ಹವಾದುವಾಗಿವೆ'' ಎಂದು ಠಾಕೂರ್ ತಿಳಿಸಿದ್ದಾರೆ.

ಏತನ್ಮಧ್ಯೆ ಶಿಫಾರಸಿನ ವರದಿ ಕುರಿತು ಎರಡು ವಾರಗಳಲ್ಲಿ ಬಿಸಿಸಿಐ ಸಾರ್ವಜನಿಕವಾಗಿ ಸ್ಪಂದಿಸಬೇಕಿದ್ದು, ಒಂದೊಮ್ಮೆ ಇದನ್ನು ಬಿಸಿಸಿಐ ನಿರ್ಲಕ್ಷಿಸಿದರೆ, ಮತ್ತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಐತಿಹಾಸಿಕ ನ್ಯಾ. ಲೋಧಾ ಶಿಫಾರಸಿಗೆ ಮೂಲ ಕಾರಣಕರ್ತರಾಗಿರುವ ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯ ವರ್ಮಾ ನಿರ್ಧರಿಸಿದ್ದಾರೆ. 2009ರಲ್ಲಿ ಸ್ಪಾಟ್ ಪಿsಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣ ಸ್ಫೋಟಗೊಂಡಾಗ ವರ್ಮಾ ಸಾರ್ವಜನಿಕ ಅರ್ಜಿ ಹೂಡಿದ್ದುದೇ ಇಷ್ಟೆಲ್ಲಕ್ಕೂ ಪ್ರೇರಣೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com