
ಲಿಸ್ಬನ್: ದೇಶಕ್ಕೆ ಚೊಚ್ಚಲ ಅಂತಾರಾಷ್ಟ್ರೀಯ ಫುಟ್ ಬಾಲ್ ಕಪ್ ತಂದುಕೊಟ್ಟ ರೋನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡಕ್ಕೆ ತವರಿನಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು.
ಆಟಗಾರರನ್ನು ಹೊತ್ತಿದ್ದ ವಿಶೇಷ ವಿಮಾನ ಪೋರ್ಚಗಲ್ ರಾಜಧಾನಿ ಲಿಸ್ಬನ್ ನಲ್ಲಿ ಇಳಿಯುತ್ತಿದ್ದಂತೆಯೇ ಪೋರ್ಚಗಲ್ ರಾಷ್ಟ್ರಧ್ವಜ ಬಣ್ಣವನ್ನು ವಿಮಾನದ ಮೇಲೆ ಹಾರಿಸುವ ಮೂಲಕ ಅಭೂತಪೂರ್ವ ಸ್ವಾಗತ ನೀಡಲಾಯಿತು. ಬಳಿಕ ವಿಮಾನ ನಿಲ್ದಾಣದದಿಂದ ಇಳಿದ ಆಟಗಾರರನ್ನು ವಿಶೇಷ ಬಸ್ ನಲ್ಲಿಕೂರಿಸಿಕೊಂಡು ಹೋಗಲಾಯಿತು. ಈ ವೇಳೆ ನಡೆದ ರೋಡ್ ಶೋನಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ರಸ್ತೆಬದಿಗಳಲ್ಲಿ ನೆರೆದು ಅಟಗಾರರನ್ನು ಅಭಿನಂದಿಸಿದರು. ತೆರೆದ ವಾಹನದಲ್ಲಿ ಆಟಗಾರರನ್ನು ಕಂಡ ಅಭಿಮಾನಿಗಳು ಘೋಷ ವಾಕ್ಯಗಳನ್ನು ಕೂಗುವ ಮೂಲಕ ಆಟಗಾರರನ್ನು ಹುರಿದುಂಬಿಸಿದ್ದಷ್ಟೇ ಅಲ್ಲದೇ, ಟ್ರೋಫಿಯನ್ನು ಕಣ್ತುಂಬಿಕೊಂಡರು.
ಇತ್ತ ತಮ್ಮ ಮೊಣಕಾಲಿನ ನೋವನ್ನು ಮರೆತಂದಿದ್ದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋರೊನಾಲ್ಡೋ ಅಭಿಮಾನಿಗಳ ಉತ್ಸಾಹವನ್ನು ನೋಡಿ ಬಸ್ ಮೇಲಿಂದಲೇ ಟ್ರೋಫಿ ಎತ್ತಿ ಹಿಡಿದು ಅಭಿಮಾನಿಗಳಿಗೆ ತೋರಿಸಿದರು. ಪೋರ್ಚುಗಲ್ ಫುಟ್ ಬಾಲ್ ತಂಡ ಮಾಜಿ ಕೋಚ್ ಗಳು ಹಾಗೂ ಆಟಗಾರರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ಚಾಂಪಿಯನ್ ಆಟಗಾರರಿಗೆ ಪೋರ್ಚುಗೀಸ್ ಅಧ್ಯಕ್ಷರಿಂದ ಸನ್ಮಾನ
ಇದೇ ವೇಳೆ ಚೊಚ್ಚಲ ಯೂರೋ ಕಪ್ ಅನ್ನು ದೇಶಕ್ಕೆ ತಂದ ಆಟಗಾರರನ್ನು ಅಭಿನಂದಿಸಲು ಪೋರ್ಚುಗೀಸ್ ಅಧ್ಯಕ್ಷ ಮಾರ್ಸಿಲೋ ರಿಬೆಲೋ ಡಿಸೌಜಾ ಅವರು ಆಟಗಾರರಿಗೆಂದೇ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದು, ಈ ವೇಳೆ ಎಲ್ಲ ಆಟಗಾರರನ್ನು ಸನ್ಮಾನಿಸುವುದಾಗಿ ತಿಳಿಸಿದ್ದಾರೆ.
ಒಂದೇ ಗೋಲ್ ನಿಂದ ಪೋರ್ಚುಗಲ್ ನಲ್ಲಿ ಹೀರೋ ಆದ ಎಡರ್
ಇನ್ನು ಪೋರ್ಚುಗಲ್ ತಂಡದ ಪರವಾಗಿ ಏಕೈಕ ಗೋಲು ಭಾರಿಸಿ ತಂಡ ಚಾಂಪಿಯನ್ ಆಗುವಲ್ಲಿ ನೆರವಾದ ತಂಡದ ಆಟಗಾರ ಎಡರ್ ಇಡೀ ರೋಡ್ ಶೋ ನ ಕೇಂದ್ರಬಿಂದುವಾಗಿದ್ದರು. ಟೂರ್ನಿ ಆರಂಭಕ್ಕೂ ಮೊದಲು ಎಡರ್ ತಂಡದ ಓರ್ವ ಆಟಗಾರ ಎನ್ನುವುದನ್ನು ಬಿಟ್ಟರೆ ಅಭಿಮಾನಿಗಳಿಗೆ ಎಡರ್ ಅಷ್ಟೇನು ಪರಿಚಿತರಾಗಿರಲಿಲ್ಲ. ಇದೀಗ ಇಡೀ ರೋಡ್ ಶೋ ನಲ್ಲಿ ನಾಯಕ ರೊನಾಲ್ಡೊಗಿಂತಲೂ ಎಡರ್ ಹೆಸರು ಹೆಚ್ಚಾಗಿ ಕೇಳಿ ಬಂದಿತ್ತು.
Advertisement