ನರಸಿಂಗ್ ಯಾದವ್ ಆಹಾರದಲ್ಲಿ ಉದ್ದೀಪನ ಔಷಧ ಸೇರಿಸಿದ ಶಂಕಿತನ ವಿಚಾರಣೆ

ಡೋಪಿಂಗ್ ಟೆಸ್ಟ್ ವೇಳೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಬಾಲಕನೋರ್ವ ಉದ್ದೇಶ ಪೂರ್ವಕವಾಗಿ ನರಸಿಂಗ್ ಯಾದವ್ ಸೇವಿಸುವ ಊಟದಲ್ಲಿ ಔಷಧ ಸೇರಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ನರಸಿಂಗ್ ಯಾದವ್ (ಸಂಗ್ರಹ ಚಿತ್ರ)
ನರಸಿಂಗ್ ಯಾದವ್ (ಸಂಗ್ರಹ ಚಿತ್ರ)

ನವದೆಹಲಿ: ಡೋಪಿಂಗ್ ಟೆಸ್ಟ್ ವೇಳೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಬಾಲಕನೋರ್ವ ಉದ್ದೇಶ  ಪೂರ್ವಕವಾಗಿ ನರಸಿಂಗ್ ಯಾದವ್ ಸೇವಿಸುವ ಊಟದಲ್ಲಿ ಔಷಧ ಸೇರಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ವ್ಯಾಪಕ ತನಿಖೆ ನಡೆಸುತ್ತಿದ್ದು, ನರಸಿಂಗ್ ಯಾದವ್ ಊಟದಲ್ಲಿ ಔಷಧ ಸೇರಿಸಿದ ಆರೋಪದ ಮೇರೆಗೆ ಬಾಲಕನೋರ್ವನನ್ನು ವಶಕ್ಕೆ ಪಡೆಯಲಾಗಿದೆ.  ವಿಚಾರಣೆ ವೇಳೆ ಬಾಲಕ ಔಷಧ ಸೇರಿಸಿದ ಕುರಿತು ತಪ್ಪೊಪ್ಪಿಕೊಂಡಿದ್ದು, ಪ್ರಸ್ತುತ ಪೊಲೀಸರ ವಶದಲ್ಲಿರುವ ಬಾಲಕ ಮತ್ತೋರ್ವ ಕುಸ್ತಿಪಟುವೊಬ್ಬರ ಸಹೋದರ ಎಂದು ತಿಳಿದುಬಂದಿದೆ. ಈ  ಬಗ್ಗೆ ಸ್ವತಃ ಭಾರತೀಯ ಕುಸ್ತಿ ಫೆಡರೇಷನ್ ಮಾಹಿತಿ ನೀಡಿದ್ದು, ಊಟದಲ್ಲಿ ಔಷಧ ಸೇವಿಸಿದ ಬಾಲಕನನ್ನು ಗುರುತಿಸಲಾಗಿದೆ. ಉದ್ದೇಶಪೂರ್ವಕವಾಗಿ ಈ ಪ್ರಕರಣ ನಡೆದಿದ್ದು, ಪ್ರಕರಣದ  ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದೆ.

ನರಸಿಂಗ್ ಯಾದವ್ ಆಹಾರಕ್ಕೆ ಉದ್ದೀಪನಾ ಮದ್ದು ಸೇರಿಸಿರಬಹುದೆಂದು ಶಂಕಿಸಲಾಗಿರುವ ಅಪ್ರಾಪ್ತ ಬಾಲಕ ಸೂಪರ್-ಹೆವಿವೈಟ್ ಕೆಟಗರಿಯ ಅಂತಾರಾಷ್ಟ್ರೀಯ ಕುಸ್ತಿಪಟು ಒಬ್ಬರ  ಸಹೋದರನಾಗಿದ್ದು, ಆತ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್​ಎಐ) ಪರೀಕ್ಷಾ ಕೇಂದ್ರದಲ್ಲಿ ನರಸಿಂಗ್ ಕೊಠಡಿ ಪ್ರವೇಶಿಸಿ ಉದ್ದೀಪನಾ ಮದ್ದನ್ನು ಆಹಾರಕ್ಕೆ ಮಿಶ್ರಣಗೊಳಿಸಿದ್ದಾರೆ ಎಂದು  ಹೇಳಲಾಗಿದೆ. ಪ್ರಾಧಿಕಾರದ ಸಿಬ್ಬಂದಿ ಅಪರಾಧಿಯನ್ನು ಗುರುತಿಸಿದ್ದಲ್ಲದೆ, ಆತ ತನ್ನ ಅಪರಾಧವನ್ನೂ ಒಪ್ಪಿಕೊಂಡಿದ್ದಾನೆ ಎಂದು ಕುಸ್ತಿ ಫೆಡರೇಶನ್ ಹೇಳಿದೆ.

ನರಸಿಂಗ್ ಅವರು ಸಂಚಿನ ಬಗ್ಗೆ ಸ್ವತಃ ಪಾಣಿಪತ್ ಸಮೀಪದ ರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ಎಫ್ ಐಆರ್  ದಾಖಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನರಸಿಂಗ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ಪ್ರಕರಣ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಆಗಸ್ಟ್ 5ರಂದು ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್ ಗೆ 74 ಕೆಜಿ ವಿಭಾಗದಲ್ಲಿ ನರಸಿಂಗ್ ಯಾದವ್ ಅವರು ಆಯ್ಕೆಯಾಗಿದ್ದರು. ಆದರೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ  ನಡೆಸಿದ್ದ ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ವಿಫಲರಾಗಿ ಕ್ರೀಡಾಕೂಟದಿಂದಲೇ ಹೊರಬಿದ್ದಿದ್ದರು. ಅವರ ಬದಲಿಗೆ ಪ್ರಸ್ತುತ ಪರ್ವೀನ್ ರಾಣಾ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com