ಸಿಖ್ ಸಂಪ್ರದಾಯದಂತೆ ಯುವರಾಜ್ ಸಿಂಗ್-ಹಜೆಲ್ ಕೀಚ್ ಮದುವೆ

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಬ್ರಿಟನ್-ಮಾರಿಷಸ್ ಮೂಲದ ಮಾಡೆಲ್...
ಮದುವೆ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್-ಹಜೆಲ್ ಕೀಚ್
ಮದುವೆ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್-ಹಜೆಲ್ ಕೀಚ್
ಚಂಡೀಗಢ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಬ್ರಿಟನ್-ಮಾರಿಷಸ್ ಮೂಲದ ಮಾಡೆಲ್ ಮತ್ತು ನಟಿ ಹಜೆಲ್ ಕೀಚ್ ಅವರನ್ನು ಪಂಜಾಬ್ ನ ಫತೇಗರ್ಹ್ ಸಾಹಿಬ್ ಜಿಲ್ಲೆಯಲ್ಲಿ ಸಿರ್ಹಿಂದ್-ಚಂಡೀಗಢ ರಸ್ತೆಯಲ್ಲಿರುವ ದಫೆರಾ ಗ್ರಾಮದಲ್ಲಿ ಗಂದ್ವಾನ್ ವಾಲೆ ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದ ಪ್ರಕಾರ ವಿವಾಹವಾದರು. ನಂತರ ನವದಂಪತಿ ಗುರುದ್ವಾರದ ಮುಖ್ಯಸ್ಥ ಬಾಬಾ ರಾಮ್ ಸಿಂಗ್ ಅವರ ದರ್ಶನ ಪಡೆದರು.
ಯುವಿಯವರ ತಾಯಿ ಶಬ್ನಮ್ ಸಿಂಗ್ ಸಂತ ಅಜಿತ್ ಸಿಂಗ್ ಹಂಸಲಿವಾಲೆ ಅವರ ಭಕ್ತೆ. ಯುವರಾಜ್ ಸಿಂಗ್ ಅವರ ರಾಜಕೀಯ ಗುರು ದೆರಾ ಹಂಸಲಿವಾಲೆ ಇದೇ ಗುರುದ್ವಾರದಲ್ಲಿರುವುದರಿಂದ ಜೋಡಿ ಇಲ್ಲಿಯೇ ವಿವಾಹವಾದರು. ಯುವರಾಜ್ ಸಿಂಗ್ ಅವರ ಕುಟುಂಬ ಸದಸ್ಯರು ಮತ್ತು ಹತ್ತಿರದ ಸ್ನೇಹಿತರು ಮದುವೆಯಲ್ಲಿ ಭಾಗವಹಿಸಿದ್ದರು. ಈ ಮಧ್ಯೆ ಯುವರಾಜ್ ಸಿಂಗ್ ತಂದೆ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಈ ಹಿಂದೆ ತಿಳಿಸಿದಂತೆ ಮದುವೆಗೆ ಬಂದಿರಲಿಲ್ಲ.
ಮದುವೆ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ತಂಡದ ಯಾವೊಬ್ಬ ಆಟಗಾರರು ಭಾಗಹಿಸಿರಲಿಲ್ಲ. ಗುರುದ್ವಾರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವಿಆರ್ ವಿ ಸಿಂಗ್, ನಟರಾದ ಗೌರವ್ ಕಪೂರ್ ಮತ್ತು ಅಂಗದ್ ಬೇಡಿ ಭಾಗವಹಿಸಿದ್ದರು.
ಯುವರಾಜ್ ಸಿಂಗ್ ಕಡು ಕೆಂಪು ಬಣ್ಣದ ವೆಲ್ವೆಟ್ ಶೆರ್ವಾನಿ, ಮರೂನ್ ಕಲರ್ ನ ಮುಂಡಾಸು ಮತ್ತು ಜೂಟಿ(ಶೂ) ಧರಿಸಿದ್ದರೆ ಹಜೆಲ್ ಕಡುಗೆಂಪು ಬಣ್ಣದ ಲೆಹೆಂಗಾ ಮತ್ತು ಚಿನ್ನದ ಬಣ್ಣದ ಅಂಬ್ರಾಯ್ಡರಿ ಮತ್ತು ಗುಲಾಬಿ ಬಣ್ಣದ ಸ್ಲೀವ್ಸ್ ಧರಿಸಿದ್ದರು. ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿದ್ದು ಅವರಿಗೆ ಚೆನ್ನಾಗಿ ಒಪ್ಪುತ್ತಿತ್ತು.
ಹಜೆಲ್ ಕುಟುಂಬ ಯುವರಾಜ್ ಕುಟುಂಬ ಗುರುದ್ವಾರಕ್ಕೆ ಆಗಮಿಸುವ ಒಂದೂವರೆ ಗಂಟೆ ಮೊದಲೇ ಬಂದಿತ್ತು. ಗುರುದ್ವಾರದ ಭಕ್ತರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಯುವರಾಜ್ ಸಿಂಗ್ ಮದುವೆ ನೋಡಲು ಆಗಮಿಸಿದ್ದರು. ಮದುವೆ ಸಮಾರಂಭ ನಡೆದ ಸ್ಥಳದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮದುವೆ ಮುಗಿದ ನಂತರ ಎಲ್ಲರಿಗೂ ಸಾಂಪ್ರದಾಯಿಕ ಆಹಾರ ಲಂಗರ್ ನನ್ನು ಪೂರೈಸಲಾಯಿತು. ನಿನ್ನೆ ಸಂಜೆ 4 ಗಂಟೆಗೆ ಎಲ್ಲರೂ ಗುರುದ್ವಾರಕ್ಕೆ ಆಗಮಿಸಿದ್ದರು.
ಮದುವೆ ಸಮಾರಂಭಕ್ಕೆ ಬಂದವರನ್ನು ಚಂಡೀಗಢಕ್ಕೆ ವಾಪಸ್ಸು ಕರೆದುಕೊಂಡು ಹೋಗಲು ಮರ್ಸಿಡಿಸ್ ಕಾರು, ಆಡಿ ಮತ್ತು ಮರ್ಸಿಡಿಸ್ ಬಸ್ಸುಗಳಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com