ಹಾಕಿ: ಪಾಕಿಸ್ತಾನಕ್ಕೆ ಭಾರತದಿಂದ ಸೋಲಿನ ರುಚಿ!

ಮಲೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾನುವಾರ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದಿದೆ.
ಪಾಕಿಸ್ತಾನದ ವಿರುದ್ಧ ಜಯ ಗಳಿಸಿದ ಭಾರತ ತಂಡ
ಪಾಕಿಸ್ತಾನದ ವಿರುದ್ಧ ಜಯ ಗಳಿಸಿದ ಭಾರತ ತಂಡ

ಕೌಂಟಾನ್: ಮಲೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾನುವಾರ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದಿದೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ನಿಮಿತ್ತ ಮಲೇಷ್ಯಾದ ಕೌಂಟಾನ್ ನಲ್ಲಿ ನಿನ್ನೆ ನಡೆದ 3ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ 3-2 ಗೋಲುಗಳ ಅಂತರದಿಂದ ಪಾಕಿಸ್ತಾನ  ತಂಡವನ್ನು ಮಣಿಸಿತು. ಅಂತೆಯೇ ಟೂರ್ನಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಭಾರತ ಒಟ್ಟು 7 ಅಂಕಗಳೊಂದಿಗೆ ಸೆಮಿಫೈನಲ್ ಗೇರುವಲತ್ತ ದಾಪುಗಾಲಿರಿಸಿದೆ.

ಕಳೆದ ಅಜ್ಲಾನ್ ಷಾ ಹಾಕಿ ಟೂರ್ನಿಯಲ್ಲಿ ಭಾರತ ವಿರುದ್ಧ 5-1 ರಿಂದ ಸೋಲು ಕಂಡಿದ್ದ ಪಾಕಿಸ್ತಾನ ಶತಾಯ-ಗತಾಯ ಗೆಲ್ಲಲ್ಲೇ ಬೇಕು ಎಂಬ ವಿಸ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಭಾರತ  ತಂಡದ ಆಲ್ ರೌಂಡ್ ಹಾಗೂ ವೇಗದ ಆಟದ ಮುಂದೆ ಪಾಕಿಸ್ತಾನ ಮಂಕಾಗಿತ್ತು. ಭಾರತ ತಂಡದ ಪರ ಪ್ರದೀಪ್ ಮೋರ್ (22ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್ (43) ಹಾಗೂ  ರಮಣ್​ದೀಪ್ ಸಿಂಗ್ (44) ಗೋಲು ಸಿಡಿಸಿದರೆ, ಪಾಕಿಸ್ತಾನ ಪರ ಮೊಹಮದ್ ರಿಜ್ವಾನ್ ಸೀನಿಯರ್ (31) ಹಾಗೂ ಮೊಹಮದ್ ಇರ್ಫಾನ್ ಜೂನಿಯರ್ (39) ಗೋಲು ಬಾರಿಸಿದರು.

ಮೊದಲಾರ್ಧದ ಅಂತ್ಯಕ್ಕೆ 1-2 ಗೋಲುಗಳ ಹಿನ್ನಡೆಯಲ್ಲಿದ್ದ ಭಾರತ ತಂಡಕ್ಕೆ ಪಂದ್ಯದಲ್ಲಿ ಸಿಕ್ಕ ಏಕೈಕ ಪೆನಾಲ್ಟಿ ಕಾರ್ನರ್ ವರವಾಗಿ ಪರಿಣಮಿಸಿತು. ಪಾಕಿಸ್ತಾನದ ಡಿಫೆಂಡರ್ ಕಾಲಿಗೆ ‘ಡಿ  ಸರ್ಕಲ್’ನಲ್ಲಿ ಚೆಂಡು ತಗುಲಿದ ಕಾರಣ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತ್ತು. ರಮಣ್​ದೀಪ್ ನೀಡಿದ ಪಾಸ್​ನಲ್ಲಿ ರೂಪಿಂದರ್ 1 ಗೋಲು ಗಳಿಸು ಮೂಲಕ ಸಮಬಲಕ್ಕೆ ಕಾರಣರಾದರು.  ಇದಾದ ಮರು ನಿಮಿಷದಲ್ಲೇ ಭಾರತಕ್ಕೆ ಮತ್ತೊಂದು ಗೋಲು ದಾಖಲಿಸುವ ಅಪೂರ್ವ ಅವಕಾಶ ದೊರೆಯಿತು. ಪಾಕಿಸ್ತಾನ ರಕ್ಷಣಾ ವಿಭಾಗವನ್ನು ವಂಚಿಸಿದ ಭಾರತದ ಡಿಫೆಂಡರ್​ಗಳು  ತಲ್ವಿಂದರ್ ಸಿಂಗ್​ಗೆ ಲಾಂಗ್ ಪಾಸ್ ನೀಡಿದ್ದರು. ಪಾಕ್ ಡಿಫೆಂಡರ್​ಗೆ ಬಡಿದು ಬಂದ ಚೆಂಡನ್ನು ಸುರಕ್ಷಿತವಾಗಿ ಪಡೆದ ತಲ್ವಿಂದರ್, ಗೋಲುಪೆಟ್ಟಿಗೆಯ ಮುಂದಿದ್ದ ರಮಣ್​ದೀಪ್​ಗೆ ಪಾಸ್  ಮಾಡಿದರು. ರಮಣ್​ದೀಪ್ ಒಂದು ಕ್ಷಣವೂ ಹಾಳುಗೆಡವದೆ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ 3-2 ಮುನ್ನಡೆ ನೀಡಿದರು.

ಈ ಅಪೂರ್ವ ಗೋಲು ಭಾರತದ ಗೆಲುವಿಗೆ ಕಾರಣವಾಯಿತು. ಅಂತಿಮವಾಗಿ ಭಾರತ ಪಾಕಿಸ್ತಾನದ ಎದುರು 3-2 ಅಂತರದ ಗೆಲುವು ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com