ನನ್ನ ಹೆಸರನ್ನು ಇತಿಹಾಸ ಪುಸ್ತಕದಲ್ಲಿ ಬರೆಯುತ್ತೇನೆ, ಯಾರೂ ಅದನ್ನು ತಿದ್ದಲು ಸಾಧ್ಯವಿಲ್ಲ: ಲಿಯಾಂಡರ್ ಪೇಸ್

ಅವರ ಸಾಧನೆಯಷ್ಟೇ ವಿವಾದಗಳಿಂದಲೂ ಹೆಸರಾದವರು. ವಿವಾದ ಅವರ ಬೆನ್ನುಬಿಟ್ಟಿಲ್ಲ. ಆದರೆ ಇದು...
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್
ನವದೆಹಲಿ: ಅವರ ಸಾಧನೆಯಷ್ಟೇ ವಿವಾದಗಳಿಂದಲೂ ಹೆಸರಾದವರು. ವಿವಾದ ಅವರ ಬೆನ್ನುಬಿಟ್ಟಿಲ್ಲ. ಆದರೆ ಇದು ತಮ್ಮ ವಿರುದ್ಧ ಅಸೂಯೆ ಪಡುವವರು ನಡೆಸುತ್ತಿರುವ ಅಪ ಪ್ರಚಾರ ಎಂದು ಭಾರತದ ಪುರುಷರ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಹೇಳಿದ್ದಾರೆ.
ಅವರು ಇಲ್ಲಿ ಯಾರ ಹೆಸರನ್ನೂ ಬೊಟ್ಟು ಮಾಡಿ ಹೇಳಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಇದು ಸಾಧನೆ ಮಾಡಲು ಸಾಧ್ಯವಾಗದವರಿಂದ ನಡೆಯುತ್ತಿರುವ ಒಳಸಂಚು ಎಂದು ಹೇಳಿದ್ದಾರೆ.
ದೇಶಕ್ಕಾಗಿ ಭಾರತ ತಂಡದಲ್ಲಿ ಆಡಬೇಕಾಗಿರುವಾಗ, ಅದು ಒಲಿಂಪಿಕ್, ಏಷ್ಯನ್ ಗೇಮ್ಸ್ ಅಥವಾ ಡೇವಿಸ್ ಕಪ್ ಆಗಿರಲಿ ಟೆನ್ನಿಸ್ ನಲ್ಲಿ ವಿವಾದಗಳು ಏಳುತ್ತವೆ. ಆದರೆ ತಮ್ಮ ಬಗ್ಗೆ ಬೇರೆಯವರು ಏನು ಹೇಳುತ್ತಾರೆ, ಏನು ಯೋಚಿಸುತ್ತಾರೆ ಎಂದು ಯೋಚಿಸುವುದಿಲ್ಲ. ಏಕೆಂದರೆ ಇತಿಹಾಸ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆಯುವುದರಲ್ಲಿ ಮಗ್ನನಾಗಿದ್ದೇನೆ, ಅದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇವತ್ತಿನ ನನ್ನ ವೃತ್ತಿ ಬದುಕಿನಲ್ಲಿ ನನ್ನ ಮೇಲೆ ಹೊಟ್ಟೆಕಿಚ್ಚುಪಡುವವರು ಬೇಕಾದಷ್ಟು ಜನ ಇದ್ದಾರೆ. 18 ಗ್ರಾಂಡ್ ಸ್ಲಾಂ ಮತ್ತು ಏಳು ಒಲಿಂಪಿಕ್ ಗೇಮ್ ಗಳಲ್ಲಿ ಆಡುವುದೇನೆಂದು ಅವರಿಗೆ ಅರ್ಥವಾಗಲಿಕ್ಕಿಲ್ಲ. ಅವರು ಕಠಿಣ ಕೆಲಸ ಮಾಡುವ ಬದಲು ನನ್ನನ್ನು ಕೆಳದಬ್ಬಲು, ಸಾರ್ವಜನಿಕರ ಮುಂದೆ ನನ್ನನ್ನು ಕೆಟ್ಟವನನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮನುಷ್ಯನಿಗೆ ಜೀವನದಲ್ಲಿ ಗೌರವ, ಮರ್ಯಾದೆ ಸಿಗಲು ಜೀವನಪೂರ್ತಿ ಬೇಕು, ಅದೇ ಗೌರವವನ್ನು ಕಳೆದುಕೊಳ್ಳಲು ನಿಮಿಷ ಸಾಕು ಎನ್ನುವ ಪೇಸ್ ಗೆ ಅವರ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಂದ ಮನಸ್ಸಿನಲ್ಲಿ ಗೊಂದಲ, ತಳಮಳವಾಗುತ್ತದೆಯೇ ಎಂದು ಕೇಳಿದಾಗ, ನಾನು ಮನುಷ್ಯ, ಆದರೆ ಅವುಗಳ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಇಂದಿನ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ನಮ್ಮ ಬಗ್ಗೆ ಟೀಕೆಗಳು ಕೇಳಿಬರಲು ಹೆಚ್ಚು ಸಮಯ ಬೇಡ. ನನ್ನ ಜೊತೆಗಿರುವ ಎನ್ನರನ್ನೂ ಅವರು ಒಳ್ಳೆಯವರೇ ಆಗಿರಲಿ, ಇಲ್ಲ ಕೆಟ್ಟವರೇ ಆಗಿರಲಿ, ಅವರನ್ನು ಗೌರವಿಸುತ್ತೇನೆ ಎಂದು ಪೇಸ್ ಹೇಳುತ್ತಾರೆ.
ಲಿಯಾಂಡರ್ ಪೇಸ್ ತಮ್ಮ ವೃತ್ತಿಬದುಕಿನ ಜೊತೆಗೆ ಖಾಸಗಿ ಬದುಕಿನ ವಿಷಯದಲ್ಲಿಯೂ ಅಷ್ಟೇ ಸುದ್ದಿಯಾದವರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ನನ್ನ ಖಾಸಗಿ ಬದುಕಲ್ಲಿ ಯಶಸ್ಸು ಕಂಡಿದ್ದೇನೆ. ಆದರೆ ಕೆಲವರು ತುಂಬಾ ದುರಾಸೆ ಹೊಂದಿರುವವರಿದ್ದಾರೆ. ಪ್ರಾಮಾಣಿಕವಾಗಿರುವುದು ಜೀವನದಲ್ಲಿ ಅತ್ಯಂತ ಮುಖ್ಯ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ಕಠಣವಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾನು ತುಂಬಾ ಜಾಗ್ರತನಾಗಿದ್ದೇನೆ.
43ರ ಈ ವಯಸ್ಸಿನಲ್ಲಿಯೂ ಟೆನ್ನಿಸ್ ಗೆ ವಿದಾಯ ಹೇಳದೆ ಆಡುತ್ತಿರುವುದು ಹಣಕ್ಕಾಗಿ ಎಂಬ ಆಪಾದನೆಯನ್ನು ತಳ್ಳಿ ಹಾಕಿದ ಅವರು, ಹಣಕ್ಕಾಗಿ ಮಾಡುವುದಾದರೆ ನನಗೆ ಬಟ್ಟೆ ಉದ್ಯಮವಿದೆ. ನಾನು ಆಡುವುದು ನನ್ನ ಮನಸ್ಸಿನ ಸಂತೋಷಕ್ಕಾಗಿ. ಮುಂದಿನ ವರ್ಷ ಇನ್ನಷ್ಟು ಹುರಿಪಿನಿಂದ ಆಡಿ ರ್ಯಾಂಕಿಂಗ್ ನಲ್ಲಿ ಮೇಲೇರುತ್ತೇನೆ, ನೋಡುತ್ತಿರಿ ಎನ್ನುತ್ತಾರೆ ಲಿಯಾಂಡರ್ ಪೇಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com