ರಿಯೊ ಒಲಿಪಿಂಕ್ಸ್ ಪದಕ ವಿಜೇತೆ ಪಿವಿ ಸಿಂಧು ಶೀಘ್ರದಲ್ಲೇ "ಡೆಪ್ಯುಟಿ ಕಲೆಕ್ಟರ್"

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕೀರ್ತಿ ತಂದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಆಂಧ್ರ ಪ್ರದೇಶ ಸರ್ಕಾರ ನೀಡಿದ್ದ ಸರ್ಕಾರಿ ಉದ್ಯೋಗದ ಆಫರ್ ಗೆ ಒಪ್ಪಿಗೆ ನೀಡಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು

ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕೀರ್ತಿ ತಂದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಆಂಧ್ರ ಪ್ರದೇಶ ಸರ್ಕಾರ ನೀಡಿದ್ದ ಸರ್ಕಾರಿ ಉದ್ಯೋಗದ ಆಫರ್ ಗೆ ಒಪ್ಪಿಗೆ ನೀಡಿದ್ದಾರೆ.

ಈ ಹಿಂದೆ ಸಿಂಧು ಬೆಳ್ಳಿ ಪದಕ ಗೆದ್ದಾಗ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಸಿಂಧುಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ ಪಿವಿ ಸಿಂಧುಗೆ ಆಂಧ್ರ ಸರ್ಕಾರದ ಗ್ರೂಪ್-1 ಅಧಿಕಾರಿ ಹುದ್ದೆ  ನೀಡುವುದಾಗಿ ಹೇಳಿತ್ತು. ಸರ್ಕಾರದ ಈ ಆಫರ್ ಅನ್ನು ಪಿವಿ ಸಿಂಧು ಕುಟುಂಬ ಸ್ವೀಕರಿಸಿದ್ದು, ನೇಮಕಾತಿ ಪತ್ರ ಬಂದ ಕೂಡಲೇ ಸಿಂಧು ಡೆಪ್ಯೂಟಿ ಕಲೆಕ್ಟರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.  ಅಂತೆಯೇ ಪಿವಿ ಸಿಂಧು ಅವರ ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಆಸೆಗೂ ಇದು ನೆರವಾಗಿದ್ದು,  ಮುಂದಿನ ಕೆಲ ವರ್ಷಗಳೊಳಗೆ ಸಿಂಧು ಐಎಎಸ್ ಅಧಿಕಾರಿ ಆಗುವ ಅವಕಾಶವನ್ನು ಹೆಚ್ಚಾಗಿದೆ.

ರಿಯೊ ಒಲಿಂಪಿಕ್ಸ್ ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದು ತವರಿಗೆ ಆಗಮಿಸಿದ್ದ ವೇಳೆ ಅವರಿಗೆ ವಿಜಯವಾಡದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಸರ್ಕಾರ ಸಿಂಧು ಸರ್ಕಾರಿ ಉದ್ಯೋಗ  ನೀಡುವುದಾಗಿ ಹೇಳಿತ್ತು.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಿವಿ ಸಿಂಧು ಅವರ ತಾಯಿ ಪಿ ವಿಜಯ ಅವರು, "ಸಿಂಧುಗೆ ವಿಜಯವಾಡದಲ್ಲಿ ಸನ್ಮಾನವಿದ್ದ ಸಂದರ್ಭದಲ್ಲಿ ಸರ್ಕಾರ ಉದ್ಯೋಗದ ಆಫರ್ ನೀಡಿತ್ತು. ಈಗ ಆಕೆ ಅದಕ್ಕೆ ಒಪ್ಪಿದ್ದು,  ನೇಮಕಾತಿ ಪತ್ರಕ್ಕಾಗಿ ಕಾಯುತ್ತಿದ್ದೇವೆ. ಕ್ರೀಡಾ ಜೀವನಕ್ಕೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಂಡು ಆಕೆ ಅಂತಿಮ ತೀರ್ಮಾನಕ್ಕೆ ಬರುತ್ತಾಳೆ ಎಂದು ಹೇಳಿದ್ದಾರೆ.

ಅಂತೆಯೇ ಪಿವಿ ಸಿಂಧು ಅವರ ತಂದೆ  ಅರ್ಜುನ ಪ್ರಶಸ್ತಿ ವಿಜೇತರೂ ಕೂಡ ಆಗಿರುವ ರಮಣ ಅವರು ಕೂಡ ಸಿಂಧು ಸರ್ಕಾರಿ ಉದ್ಯೋಗ ಸೇರುವ ನಿರ್ಧಾರವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ. ವಿಶೇಷ ಮಾನ್ಯತೆಯ ಆಧಾರದಲ್ಲಿ ಸಿಂಧು ಮುಂದಿನ 8-9  ವರ್ಷಗಳೊಳಗೆ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. 21 ವರ್ಷದ ಷಟ್ಲರ್ ಸದ್ಯಕ್ಕೆ ಕೇಂದ್ರ ಸಾರ್ವಜನಿಕ ವಲಯದ ತೈಲ ಕಂಪನಿ ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್​ನಲ್ಲಿ (ಬಿಪಿಸಿಎಲ್)  ಕ್ರೀಡಾ ಉಪ-ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com