

ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ರಾಫೆಲ್ ನಡಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಏಕಪಕ್ಷೀಯವಾಗಿದ್ದ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಸ್ವಿಸ್ ನ ಸ್ಟ್ಯಾನ್ ವಾವ್ರಿಂಕಾ ವಿರುದ್ಧ 6-2, 6-3, 6-1 ನೇರ ಸೆಟ್ ಗಳ ಭರ್ಜರಿ ಜಯ ಸಾಧಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ನಡಾಲ್ 6-2, 6-3, 6-1 ಸೆಟ್ಗಳ ಅಂತರದಲ್ಲಿ ಗೆದ್ದು ಬೀಗಿದರು. ಇದಲ್ಲದೇ ಫ್ರೆಂಚ್ ಓಪನ್ ನಲ್ಲಿ ಫೈನಲ್ ಪ್ರವೇಶಿಸಿದಾಗಲೆಲ್ಲಾ ಪ್ರಶಸ್ತಿಯೊಂದಿಗೆ ಹಿಂದಿರುಗಿರುವ ದಾಖಲೆಯನ್ನೂ ನಡಾಲ್ ಮುಂದುವರಿಸಿದರು. 2015ರಲ್ಲಿ ಚಾಂಪಿಯನ್ ಆಗಿದ್ದ ವಾವ್ರಿಂಕಾ, 2ನೇ ಫ್ರೆಂಚ್ ಓಪನ್ ಗೆಲ್ಲುವ ಕನಸು ನುಚ್ಚು ನೂರಾಯಿತು. ಅಲ್ಲದೇ 3 ಗ್ರ್ಯಾಂಡ್ ಸ್ಲಾಂ ಗೆದ್ದಿರುವ ವಾವ್ರಿಂಕಾ, ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಂ ಫೈನಲ್ನಲ್ಲಿ ಸೋಲುಂಡರು.
ವಿಶೇಷವೆಂದರೆ ಈ ಬಾರಿ ಪಂದ್ಯಾವಳಿಯ ಪ್ರಶಸ್ತಿ ಮೊತ್ತವನ್ನು 15.13 ಕೋಟಿಗೆ ಹೆಟ್ಟಿಸಲಾಗಿತ್ತು. ತಮ್ಮ ಹತ್ತನೇ ಪ್ರಶಸ್ತಿ ಪಡೆದ ನಡಾಲ್ ಈ ಭಾರಿ ಬಹುಮಾನದ ಮೊತ್ತವನ್ನು ಪಡೆದರು. ಅಂತೆಯೇ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟಸ್ವಿಜರ್ ಲೆಂಡ್ನ ಸ್ಟಾನಿಸ್ಲಾಸ್ ವಾವ್ರಿಂಕಾ ರು.7.64 ಕೋಟಿ ಬಹುಮಾನ ಪಡೆದರು.
10ನೇ ಬಾರಿಗೆ ಸಿಂಗಲ್ಸ್ ಚಾಂಪಿಯನ್ ಪಟ್ಟಅಲಂಕರಿಸಿದ ರಾಫೆಲ್ ನಡಾಲ್
ತಮ್ಮ 13 ವರ್ಷಗಳ ಟೆನ್ನಿಸ್ ವೃತ್ತಿ ಬದುಕಿನಲ್ಲಿ ನಡಾಲ್ 10 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಫ್ರೆಂಚ್ ಓಪನ್ ಗೆದ್ದಿದ್ದ ನಡಾಲ್ 2006, 2007, 2008ರಲ್ಲೂ ಜಯಿಸಿ ಸತತ 4 ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆದಿದ್ದರು. ಆನಂತರ 2008, 2010, 2011, 2012, 2013, 2014ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಪ್ರಶಸ್ತಿ ಗೆಲ್ಲುವ ಮೂಲಕ ಸ್ಪೇನ್ನ ದಿಗ್ಗಜ 15ನೇ ಗ್ರ್ಯಾಂಡ್ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು. 18 ಗ್ರ್ಯಾಂಡ್ಸ್ಲಾಂ ಗೆದ್ದಿರುವ ರೋಜರ್ ಫೆಡರರ್ ನಂತರ ಅತಿಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆಗೆ ನಡಾಲ್ ಪಾತ್ರರಾಗಿದ್ದಾರೆ. ಅಲ್ಲದೇ 14 ಗ್ರ್ಯಾಂಡ್ಸ್ಲಾಂ ಗೆದ್ದಿದ್ದ ಅಮೆರಿಕದ ದಿಗ್ಗಜ ಪೀಟ್ ಸ್ಯಾಂಪರಾಸ್ ದಾಖಲೆಯನ್ನು ನಡಾಲ್ ಮುರಿದರು. ಒಂದೇ ಗ್ರ್ಯಾಂಡ್ಸ್ಲಾಂನಲ್ಲಿ 10 ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೂ ನಡಾಲ್ ಪಾತ್ರರಾದರು.