ಅಂಡರ್ 17 ವಿಶ್ವಕಪ್ ಫುಟ್ ಬಾಲ್: ಕೊಲಂಬಿಯಾ ವಿರುದ್ಧ ಭಾರತಕ್ಕೆ 1-2 ಅಂತರದ ಸೋಲು!

ಭಾರತದಲ್ಲಿ ನಡೆಯುತ್ತಿರುವ ಅಂಡರ್ 17 ವಿಶ್ವಕಪ್ ಫುಟ್ ಬಾಲ್ ಸರಣಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.
ಭಾರತದ ಫೀಫಾ ಇತಿಹಾಸದ ಮೊದಲ ಗೋಲು ದಾಖಲಿಸಿದ ಜೀಕ್ಸನ್
ಭಾರತದ ಫೀಫಾ ಇತಿಹಾಸದ ಮೊದಲ ಗೋಲು ದಾಖಲಿಸಿದ ಜೀಕ್ಸನ್
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಅಂಡರ್ 17 ವಿಶ್ವಕಪ್ ಫುಟ್ ಬಾಲ್ ಸರಣಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.
ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ ಬಾಲ್‌ನಲ್ಲಿ ಕೊಲಂಬಿಯಾ ಎದುರು ಭಾರತ ತಂಡ 1–2 ಗೋಲುಗಳ ಸೋಲೊಪ್ಪಿಕೊಂಡಿತು.  ಪಂದ್ಯದುದ್ದಕ್ಕೂ ಅಪ್ರತಿಮ ಸಾಮರ್ಥ್ಯ ತೋರಿದ ಭಾರತ ಯುವ ಪಡೆ ಪಂದ್ಯ ಅಂತಿಮಭಾಗದಲ್ಲಿ ಸೋಲಿನ ಸುಳಿಗೆ ಸಿಲುಕಿತು. ಕೊಲಂಬಿಯಾ ಪರ ಜೆ. ಪೆನಲೋಜಾ 49 ಮತ್ತು 83ನೇ ನಿಮಿಷದಲ್ಲಿ ಗೋಲು ಗಳಿಸಿದರೆ  ಭಾರತದ ಪರ 82ನೇ ನಿಮಿಷದಲ್ಲಿ ಜೀಕ್ಸನ್‌ ಗೋಲು ಗಳಿಸಿದರು.

ಕೊಲಂಬಿಯಾ ಪರ ಜೆ. ಪೆನಲೋಜಾ 49ನೇ ನಿಮಿಷದಲ್ಲಿ ಗೋಲು ಗಳಿಸಿ ಕೊಲಂಬಿಯಾ ಮುನ್ನಡೆ ತಂದುಕೊಟ್ಟರು. ಬಳಿಕ ಕೊಲಂಬಿಯಾ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಆದರೆ ಪಂದ್ಯದ 82ನೇ ನಿಮಿಷದಲ್ಲಿ ಭಾರತ ಜೀಕ್ಸನ್ ಕೊಲಂಬಿಯಾ ರಕ್ಷಣಾ ಗೋಡೆಯನ್ನು ಬೇಧಿಸಿ ಗೋಲು ಗಳಿಸಿದರು. ಆ ಮೂಲಕ ಜೀಕ್ಸನ್‌ ಭಾರತದ ಪರ ವಿಶ್ವಕಪ್‌ ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು.

ಭಾರತದ ಈ ಗೋಲಿನ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲ್ಲಿಲ್ಲ. ಕಾರಣ ಮರುಕ್ಷಣವೇ ಕೊಲಂಬಿಯಾ ಜೆ. ಪೆನಲೋಜಾ ಮತ್ತೆ ಭಾರತೀಯ ಆಟಗಾರರನ್ನು ವಂಚಿಸುವಲ್ಲಿ ಯಶಸ್ವಿಯಾಗಿ ತಂಡದ ಪರ ಹಾಗೂ ವೈಯುಕ್ತಿಕ ಎರಡನೇ ಗೋಲು ಗಳಿಸಿದರು. ಆ ಮೂಲಕ ಕೊಲಂಬಿಯಾಗೆ ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿದರು. ಬಳಿಕ ರಕ್ಷಣಾತ್ಮಕ ಆಟವಾಡಿದ ಕೊಲಂಬಿಯಾ ಯಾವುದೇ ಅಪಾಯಕ್ಕೆ ಎಡೆ ಮಾಡಿಕೊಡದೇ 2-1 ಅಂತರದಲ್ಲಿ ಭಾರತವನ್ನು ಮಣಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com