ಚೆನ್ನೈ: ಮಹಿಳೆಯರು, ಯುವತಿಯರು ಸೇರಿದಂತೆ ಬಾಲಕಿಯರ ಮೇಲೆ ಕೂಡ ಲೈಂಗಿಕ ಕಿರುಕುಳ ದೇಶದ ಅಲ್ಲಲ್ಲಿ ನಡೆಯುತ್ತಲೇ ಇವೆ. ಇತ್ತೀಚೆಗೆ ಚೆನ್ನೈಯಲ್ಲಿ 17 ಮಂದಿ ವಿರುದ್ಧ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ದೂರು ದಾಖಲಾಗಿತ್ತು.
ಭಾರತದಲ್ಲಿ ನಡೆಯುವ ಇಂತಹ ಪ್ರಕರಣಗಳು ಇದೀಗ ಹೊರದೇಶದವರನ್ನು ಕೂಡ ಆತಂಕಕ್ಕೆ ಈಡುಮಾಡಿದೆ. ಚೆನ್ನೈಯಲ್ಲಿ ನಡೆಯುತ್ತಿರುವ ವಿಶ್ವ ಜ್ಯೂನಿಯರ್ ಸ್ಕ್ವಾಶ್ ಚಾಂಪಿಯನ್ ಷಿಪ್ ಗೆ ಸ್ವಿಡ್ಜರ್ಲೆಂಡ್ ತಂಡದ ಚಾಂಪಿಯನ್ ಬಂದಿಲ್ಲ, ಕಾರಣವೇನೆಂದು ಕೇಳಿದರೆ ಆಕೆಯ ಪೋಷಕರು ಭಾರತಕ್ಕೆ ಕಳುಹಿಸಲಿಲ್ಲವಂತೆ.
ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಂದಾಗಿ ಇಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷಿತವಿಲ ಎಂಬುದು ಅವರ ಅಳಲು. ಇರಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸಹ ಕಳವಳ ವ್ಯಕ್ತಪಡಿಸಿದ್ದು ಅಲ್ಲಿನ ಆಟಗಾರ್ತಿಯರು ಒಬ್ಬೊಬ್ಬರೇ ಓಡಾಡದಂತೆ ಸೂಚನೆ ನೀಡಲಾಗಿದೆ. ಇನ್ನು ಕೆಲ ಆಟಗಾರ್ತಿಯರು ಬಟ್ಟೆ ಧರಿಸುವುದರತ್ತ ಕೂಡ ಗಮನ ಹರಿಸಿದ್ದಾರೆ.
ಸ್ವಿಡ್ಜರ್ಲೆಂಡ್ ತಂಡದ ಕೋಚ್ ಪಸ್ಕಲ್ ಬುರಿನ್, ತಮ್ಮ ತಂಡದ ಚಾಂಪಿಯನ್ ಅಂಬ್ರೆ ಅಲ್ಲಿಂಕ್ಸ್ ಬಂದಿಲ್ಲ, ಇಲ್ಲಿನ ಪರಿಸ್ಥಿತಿ ಕಂಡು ಆಕೆಯ ಪೋಷಕರಿಗೆ ಆತಂಕವಾಗಿದೆ, ಹೀಗಾಗಿ ಅವರು ಕಳುಹಿಸಿಕೊಡಲಿಲ್ಲ. ಇಂಟರ್ನೆಟ್ ಮೂಲಕ ಭಾರತ ಅಸುರಕ್ಷತೆಯ ದೇಶ ಎಂದು ಗೊತ್ತಾಗಿ ಕಳುಹಿಸಲಿಲ್ಲ ಎಂದಿದ್ದಾರೆ. ಆದರೆ ಇಲ್ಲಿಗೆ ಬಂದ ನಂತರ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
ಬೇರೆ ಸ್ಕ್ವಾಶ್ ತಂಡಗಳು ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿವೆ. ನಾವು ಕೂಡ ಇಂತಹ ಪ್ರಕರಣಗಳನ್ನು ಕೇಳಿದ್ದೇವೆ, ಹೀಗಾಗಿ ನಮ್ಮ ಪುತ್ರಿ ಯಾವಾಗಲೂ ತಂಡದ ಜೊತೆ ಇರಬೇಕೆಂದು ಹೇಳಿದ್ದೇವೆ ಎನ್ನುತ್ತಾರೆ ಇರಾನ್ ತಂಡದ ಆಟಗಾರ್ತಿ ನಿಕಿಯ ತಂದೆ ಅಮೀರ್.
ಆಸ್ಟ್ರೇಲಿಯಾ ತಂಡದ ಆಟಗಾರರು ಕೂಡ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ನಂತಹ ದೇಶದಲ್ಲಿ ನಾವು ಒಬ್ಬೊಬ್ಬರೇ ಓಡಾಡುತ್ತೇವೆ, ಯಾವ ಸಮಸ್ಯೆಯಾಗುವುದಿಲ್ಲ. ಆದರೆ ಭಾರತದಲ್ಲಿ ಓಡಾಡಲು ಭಯವಾಗುತ್ತಿದೆ ಎನ್ನುತ್ತಾರೆ ಆಟಗಾರ್ತಿ ಅಲೆಕ್ಸ್ ಹೈಡನ್.
Advertisement