ಸಿಡ್ನಿ: ಮೂರನೇ ಶ್ರೇಯಾಂಕಿತೆ ಪಿ.ವಿ ಸಿಂಧು ಅವರು ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತು, ಪದಕದ ಆಸೆ ಕೈ ಬಿಟ್ಟಿದ್ದಾರೆ.
ಮಂಗಳವಾರ ನಡೆದ ವನಿತೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 19-21, 18-21 ರಿಂದ ಥಾಯ್ಲೆಂಡ್ ನ ನಿಚಾನ ಜಿಂದಪೊಲ್ ವಿರುದ್ಧ ಎರಡು ನೇರ ಸೆಟ್ ಗಳಿಂದ ಸೋಲುವ ಮೂಲಕ ಆಸ್ಟ್ರೇಲಿಯಾ ಓಪನ್ ನಿಂದ ಹೊರ ಬಿದ್ದಿದ್ದಾರೆ.
ಉಳಿದಂತೆ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸಮೀರ್ ವರ್ಮ 16-21,21-7, 13-21 ರಿಂದ ಚೈನೀಸ್ ತೇಪಿಯ ವಾಂಗ್ ಜು ವಿ ವಿರುದ್ಧ ಒಂದು ಗಂಟೆಯ ಹೋರಾಟದಲ್ಲಿ ಸೋಲು ಅನುಭವಿಸಿದರು. ಸಾಯಿ ಪ್ರಣೀತ್ ಅವರ ಮುನ್ನಡೆ ಆಸೆಗೆ ಇಂಡೋನೇಷಿಯಾದ ಆಟಗಾರ ಬ್ರೇಕ್ ಹಾಕಿದರು.
ಪುರುಷರ ಡಬಲ್ಸ್ ಪಂದ್ಯದಲ್ಲೂ ಸ್ವಸ್ತಿಕ್ ರಾಜ್ ಹಾಗೂ ಚಿರಾಗ್ ಶೆಟ್ಟಿ 19-21, 18-21 ರಿಂದ ಚೀನಾದ ಲು ಜುನ್ ಹ್ಯೂ ಹಾಗೂ ಯುಚೇನ್ ವಿರುದ್ಧ ನಿರಾಸೆ ಅನುಭವಿಸಿದರು.