ಆತ್ಮೀಯ ಭಾರತ, ಅದು ನನ್ನ ತಂಡ, ನನ್ನ ಹುಡುಗರು: ಸುನೀಲ್ ಚೆಟ್ರಿ

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ  ಎರಡನೇ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ 0-0 ಅಂತರದಲ್ಲಿ ಡ್ರಾ ಮಾಡಿಕೊಂಡಿತು.
ಸುನೀಲ್ ಚೆಟ್ರಿ
ಸುನೀಲ್ ಚೆಟ್ರಿ

ದೋಹಾ: ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ  ಎರಡನೇ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ 0-0 ಅಂತರದಲ್ಲಿ ಡ್ರಾ ಮಾಡಿಕೊಂಡಿತು.

62ನೇ ಶ್ರೇಯಾಂಕದ ಕತಾರ್ ವಿರುದ್ಧ 103ನೇ ಶ್ರೇಯಾಂಕದ ಭಾರತ ಭಾರಿ ಪೈಪೋಟಿ ನೀಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಆ ಮೂಲಕ ಮೊದಲನೇ ಅಂಕ ತನ್ನ ಖಾತೆಗೆ ಸೇರಿಸಿಕೊಂಡಿತು.

ಅನಾರೋಗ್ಯದಿಂದಾಗಿ ನಿಯಮಿತ ನಾಯಕ ಸುನೀಲ್‌ ಚೆಟ್ರಿ ಅನುಪಸ್ಥಿಯಲ್ಲಿ ಗುರುಪ್ರೀತ್‌ ಸಿಂಗ್‌ ಸಂಧು ಅವರು ತಂಡವನ್ನು ಮುನ್ನಡೆಸಿದ್ದರು. ಅಮೋಘ ಗೋಲ್‌ ಕೀಪಿಂಗ್‌ ಮೂಲಕ ಗುರುಪ್ರೀತ್‌ ಸಿಂಗ್‌ ಸಂಧು ಅವರು ಕತಾರ್‌ ತಂಡದ ಹಲವು ಬೆಂಕಿ ಹೊಡೆತಗಳನ್ನು ನಿಯಂತ್ರಿಸಿದ್ದರು. 

ಪಂದ್ಯದ ಬಳಿಕ ಟ್ವೀಟ್‌ ಮಾಡಿದ್ದ ಸುನೀಲ್‌ ಚೆಟ್ರಿ, " ಆತ್ಮೀಯ ಭಾರತ, ಅದು ನನ್ನ ತಂಡ ಹಾಗೂ ಅವರೆಲ್ಲ ನಮ್ಮ ಹುಡುಗರು! ಈ ಸನ್ನಿವೇಶದಲ್ಲಿ ನಾನೆಷ್ಟು ಹೆಮ್ಮೆ ಪಡುತ್ತಿದ್ದೇನೆಂದರೆ ವಿವರಿಸಲು ಸಾಧ್ಯವಾಗುತ್ತಿಲ್ಲ. ಅಂಕಪಟ್ಟಿಯಲ್ಲಿ ದೊಡ್ಡ ಫಲಿತಾಂಶ ನಮ್ಮ ಪರ ಬಂದಿಲ್ಲ. ಆದರೆ, ಹೋರಾಟದ ವಿಷಯದಲ್ಲಿ ಅದು ಪಡೆಯುವಷ್ಟು ದೊಡ್ಡದಾಗಿದೆ. ಇದರ ಶ್ರೇಯ ಕೋಚಿಂಗ್‌ ಹಾಗೂ ಡ್ರೆಸ್ಸಿಂಗ್‌ ಕೊಠಡಿಯ ಸಿಬ್ಬಂದಿಗೆ ಸಲ್ಲಬೇಕು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  

ಇತ್ತೀಚಿಗಷ್ಟೆ ಅರ್ಜುನ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಬೆಂಗಳೂರು ಎಫ್‌ಸಿ ತಂಡದ ಗುರುಪ್ರೀತ್‌ ಸಿಂಗ್‌ ಸಂಧು ಪಂದ್ಯವೀಡಿ ಎದುರಾಳಿ ಮುಂಚೂಣಿ ಆಟಗಾರರನ್ನು ಗೋಲು ಗಳಿಸುವ ಪ್ರಯತ್ನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕತಾರ್‌ ಸ್ಟ್ರೈಕರ್‌ಗಳು ಸುಮಾರು  27 ಬಾರಿ ಗೋಲಿನ ಕಡೆ ಬಾರಿಸಿದ್ದ ಶಾಟ್‌ಗಳನ್ನು ಸಂಧು ತಡೆಯುವಲ್ಲಿ ಸಫಲರಾಗಿದ್ದರು. ಇದರಿಂದ ಹೆಚ್ಚಿನ ಸಂತಸಕ್ಕೆ ಒಳಗಾದ ನೂತನ ಕೋಚ್‌ ಇಗೋರ್‌ ಸ್ಟಿಮ್ಯಾಕ್‌ ಅವರು ಪಂದ್ಯ ಗೆದ್ದಷ್ಟೆ ಖುಷಿಪಟ್ಟರು.

ಎದುರಾಳಿ ಕತಾರ್‌ ತಂಡಕ್ಕೆ ಹಲವು ಬಾರಿ ಗೋಲು ಗಳಿಸುವ ಅವಕಾಶ ಒದಗಿ ಬಂದಿತ್ತು.  ಇಸ್ಮಾಯಿಲ್‌ ಮೊಹಮ್ಮದ್‌ 85ನೇ ನಿಮಿಷದಲ್ಲಿ ಗೋಲಿನತ್ತ ಬಲವಾಗಿ ಹೊಡೆದ ಚೆಂಡನ್ನು ಗುರುಪ್ರೀತ್‌ ಸಿಂಗ್‌ ಸಂಧು ತಡೆದರು. ಆ ಮೂಲಕ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು. 

ಭಾರತ ಮೊದಲನೇ ಪಂದ್ಯದಲ್ಲಿ ಒಮನ್‌ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಅಕ್ಟೋಬರ್‌ 15 ರಂದು ಭಾರತ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com