ಫೀಫಾದ ಕೋವಿಡ್-19 ಅರಿವು ಅಭಿಯಾನ: ಮೆಸ್ಸಿ ಜೊತೆ ಭಾರತದ ಸುನಿಲ್ ಛೆಟ್ರಿ ಆಯ್ಕೆ

ಕೋವಿಡ್-19 ವೈರಸ್ ಕುರಿತು ಅರಿವು ಮೂಡಿಸುವ ಅಭಿಯಾನಕ್ಕೆ ಆಯ್ಕೆ ಮಾಡಿರುವ 28 ಮಾಜಿ ಹಾಗೂ ಹಾಲಿ ಫುಟ್ಬಾಲ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರನ್ನು ಸಹ ಫಿಫಾ ಆಯ್ಕೆ ಮಾಡಿದೆ.
ಸುನೀಲ್ ಛೆಟ್ರಿ
ಸುನೀಲ್ ಛೆಟ್ರಿ

ನವದೆಹಲಿ: ಕೋವಿಡ್-19 ವೈರಸ್ ಕುರಿತು ಅರಿವು ಮೂಡಿಸುವ ಅಭಿಯಾನಕ್ಕೆ ಆಯ್ಕೆ ಮಾಡಿರುವ 28 ಮಾಜಿ ಹಾಗೂ ಹಾಲಿ ಫುಟ್ಬಾಲ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರನ್ನು ಸಹ ಫಿಫಾ ಆಯ್ಕೆ ಮಾಡಿದೆ.

ಫಿಫಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫೀಫಾ ವಿಶ್ವ ಪ್ರಸಿದ್ಧ ಫುಟ್ಬಾಲ್ ಆಟಗಾರರ ನೇತೃತ್ವದಲ್ಲಿ ಹೊಸ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೈಜೋಡಿಸಿವೆ. ಅವರು ರೋಗ ಹರಡುವುದನ್ನು ತಡೆಯಲು ಐದು ಪ್ರಮುಖ ಹಂತಗಳನ್ನು ಅನುಸರಿಸಲು ವಿಶ್ವದಾದ್ಯಂತ ಎಲ್ಲ ಜನರಿಗೆ ಕರೆ ನೀಡುತ್ತಿದ್ದಾರೆ.

ಕೊರೊನಾ ವೈರಸ್ ಮಟ್ಟ ಹಾಕಲು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಫಿಫಾ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಲ್ಲಿ ಜನಪ್ರಿಯ ಆಟಗಾರರನ್ನು ಒಳಗೊಂಡಿರುವ ಜಾಗೃತಿ ವಿಡಿಯೋವನ್ನು ರಚಿಸಿದೆ. 13 ಭಾಷೆಗಳಲ್ಲಿ ಕೊರೊನಾ ವೈರಸ್ ಜಾಗೃತಿ ವಿಡಿಯೋ ರಚಿಸಲಾಗಿದ್ದು, ಫುಟ್ಬಾಲ್ ರಂಗದ ದಂತಕಥೆಗಳಾದ ಕ್ರಿಸ್ಟಿಯಾನೋ ರೊನಾಲ್ಡೋ, ಲಿಯೋನಲ್ ಮೆಸ್ಸಿ ಸೇರಿದಂತೆ 28 ಸ್ಟಾರ್ ಆಟಗಾರರನ್ನು ಅಭಿಯಾನದಲ್ಲಿ ಬಳಸಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಭಾರತದ ಫುಟ್ಬಾಲ್ ತಾರೆ ಹಾಗೂ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೂಡ ಭಾಗಿಯಾಗಿದ್ದಾರೆ.

'ಪಾಸ್ ದಿ ಮೆಸೇಜ್ ಟು ಕಿಕ್ ಔಟ್ ಕೊರೊನಾ ವೈರಸ್' (ಕೊರೊನಾ ವೈರಸ್ ಹೊಗಲಾಡಿಸಲು ಸಂದೇಶ ಹಂಚಿರಿ) ಎಂಬ ಹೆಸರಿನಡಿಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯಂತೆ ಕೊರೊನಾ ವೈರಸ್ ತಡೆಗಟ್ಟಲು ಕೈಗೊಳ್ಳಬೇಕಾದ ಐದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳಲಾಗಿದೆ. ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಸರ್ ಉಪಯೋಗಿಸಿ ತೊಳೆಯುವುದು, ಮುಖವನ್ನು ಸ್ಪರ್ಶಿಸದೇ ಇರುವುದು, ಅಂತರವನ್ನು ಕಾಯ್ದುಕೊಳ್ಳುವುದು, ಕೆಮ್ಮು ಬಂದಾಗ ಮುಖವನ್ನು ಮುಚ್ಚಿಕೊಳ್ಳುವುದು ಮತ್ತು ಮನೆಯಲ್ಲೇ ಇರುವಂತೆಯೇ ಸೂಚಿಸಲಾಗಿದೆ.

13 ಭಾಷೆಯಲ್ಲೇ ಜಾಗೃತಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಅರ್ಜೇಂಟೀನಾ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಹೊರತಾಗಿ ವಿಶ್ವಕಪ್ ವಿಜೇತರಾದ ಪಿಲಿಪ್ ಲ್ಯಾಹ್ಮ್, ಇಕೆರ್ ಕ್ಯಾಸಿಲಾಸ್, ಕಾರ್ಲೆಸ್ ಪುಯೋಲ್ ಮುಂತಾದವರನ್ನು ಒಳಗೊಂಡಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿ ಸುನಿಲ್ ಛೆಟ್ರಿ ಕಾಣಿಸಿಕೊಂಡಿರುವುದು ಗಮನಾರ್ಹವೆನಿಸಿದೆ. 

ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫುಟ್ಬಾಲ್ ಸೇರಿದಂತೆ ಬಹುತೇಕ ಎಲ್ಲ ಕ್ರೀಡಾ ಕೂಟಗಳನ್ನು ರದ್ದುಗೊಳಿಸಲಾಗಿದೆ. ಜಪಾನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡುವ ಎಲ್ಲ ಸಾಧ್ಯತೆಗಳು ಕಂಡುಬಂದಿದೆ. ಈ ಮಧ್ಯೆ ಕ್ರೀಡಾ ತಾರೆಗಳು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂದ ಹಾಗೆ ಜಾಗತಿಕವಾಗಿ 3, 81, 653 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಕಂಡುಬಂದಿದೆ. ಈ ಪೈಕಿ 16,558 ಮಂದಿ ಸಾವಿಗೆ ಶರಣಾಗಿದ್ದಾರೆ. ಇನ್ನು ಭಾರತದಲ್ಲಿ 504 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10 ಮಂದಿ ಮೃತಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com