ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸೆಮಿ ಫೈನಲ್ ನಲ್ಲಿ ಆಡಿದ ಭಾರತದ ಪುರುಷರ ಹಾಕಿ ತಂಡ ಸೋಲು ಕಂಡಿದೆ. ಮಂಗಳವಾರ ಬೆಳಗ್ಗೆ ಮುಗಿದ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಭಾರತ ಹಾಕಿ ತಂಡ ಸೋಲನುಭವಿಸಿದೆ.
ಬೆಲ್ಜಿಯಂ ತಂಡದ ವಿರುದ್ಧ 5-2 ಗೋಲುಗಳ ಅಂತರದಿಂದ ಭಾರತ ತಂಡ ಸೋಲು ಕಂಡಿದ್ದು ಇನ್ನು ಕಂಚಿನ ಪದಕಕ್ಕೆ ಸೆಣಸಾಡಲಿದೆ. ಕಂಚಿನ ಪದಕದ ಕನಸು ಜೀವಂತವಾಗಿದೆ.
ಪಂದ್ಯ ಮುಕ್ತಾಯ ನಂತರ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಸೋಲು-ಗೆಲುವು ಜೀವನದ ಭಾಗ. ನಮ್ಮ ಭಾರತದ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ಪಂದ್ಯಕ್ಕೆ ಮತ್ತು ಭವಿಷ್ಯದ ಅಭಿಯಾನಕ್ಕೆ ತಂಡಕ್ಕೆ ಶುಭಾಶಯಗಳು, ನಮ್ಮ ಆಟಗಾರರ ಬಗ್ಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಅವರಿಗೆ ಕರೆ ಮಾಡಿ ಮಾತನಾಡಿರುವ ಪ್ರಧಾನಿ ಮೋದಿ, ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರಿಸಿದ್ದೀರಿ, ಮುಂದಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ಚೆನ್ನಾಗಿ ಆಡಿ ಎಂದು ಹಾರೈಸಿದ್ದಾರೆ.
Advertisement