
ನವದೆಹಲಿ: ಭಾರತಕ್ಕೆ ಸತತ ಎರಡು ಒಲಿಂಪಿಕ್ ಪದಕ ಗಳಿಸಿರುವ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಕಳೆದ ಸಂಜೆ ಸ್ವದೇಶಕ್ಕೆ ಆಗಮಿಸಿದ್ದಾರೆ. ಟೋಕಿಯೊ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗಳಿಸಿರುವ ಅವರಿಗೆ ತವರು ನೆಲಕ್ಕೆ ಬಂದಿಳಿಯುತ್ತಿದ್ದಂತೆ ಅದ್ದೂರಿ ಸ್ವಾಗತ ಕೋರಲಾಯಿತು.
2016ರ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ಪಿ ವಿ ಸಿಂಧು ನಿನ್ನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಲ್ಲಿ ಜಮಾಯಿಸಿದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಭದ್ರತಾ ಸಿಬ್ಬಂದಿಗಳ ಪಹರೆಯೊಂದಿಗೆ ಸಿಂಧು ಅವರು ಮಾಸ್ಕ್ ಧರಿಸಿದ್ದರು. ಅವರನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ)ಯ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ, ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಸ್ವಾಗತ ಕೋರಿದರು.
ಸಿಂಧು ಮತ್ತು ಅವರ ಕೊರಿಯಾದ ಕೋಚ್ ಪಾರ್ಕ್ ತೈ-ಸ್ಯಾಂಗ್ ಅವರನ್ನು ಸಹ ಸಿಂಘಾನಿಯಾ ವಿಮಾನ ನಿಲ್ದಾಣದಲ್ಲಿ ಪ್ರೀತಿಯಿಂದ ಬರಮಾಡಿಕೊಂಡರು.
ನನಗೆ ಪ್ರತಿಯೊಬ್ಬರೂ ಸ್ವಾಗತ ಕೋರುತ್ತಿರುವುದು ನೋಡಿದರೆ ಖುಷಿಯಾಗುತ್ತದೆ. ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ನನ್ನ ವಂದನೆಗಳು, ಇದು ನನಗೆ ಅತ್ಯಂತ ಖುಷಿಯ ದಿನ ಎಂದು ಸಿಂಧು ಹೇಳಿದ್ದಾರೆ.
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಪಿ ವಿ ಸಿಂಧು ಚೀನಾದ ಹೆ ಬಿಂಗ್ ಜಿಯೊವೊ ಅವರನ್ನು ಸೋಲಿಸಿ ಕಂಚಿನ ಪದಕ ಗಳಿಸಿದ್ದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸ್ವಾಗತ: ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಲಿಂಪಿಕ್ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು, ಅಷ್ಟು ದೊಡ್ಡ ಕಾರ್ಯಕ್ರಮಕ್ಕೆ ನಮ್ಮನ್ನು ಪ್ರಧಾನ ಮಂತ್ರಿಗಳು ಆಹ್ವಾನಿಸಿರುವುದು ಖುಷಿಯ ವಿಚಾರ. ಪ್ರಧಾನಿಯವರನ್ನು ಭೇಟಿ ಮಾಡಿ ಮಾತನಾಡಿ ಅವರ ಜೊತೆ ಔತಣಕೂಟದಲ್ಲಿ ಭಾಗಿಯಾಗಲು ಅವಕಾಶ ಸಿಗುತ್ತಿರುವುದು ನಿಜಕ್ಕೂ ನಮ್ಮ ಪಾಲಿಗೆ ಸುದೈವ ಎಂದು ಹೇಳಿದ್ದಾರೆ.
ಅಭಿನಂದನೆ ಕಾರ್ಯಕ್ರಮ: ಇನ್ನು ದೆಹಲಿಯಲ್ಲಿ ನಿನ್ನೆ ಪಿ ವಿ ಸಿಂಧುಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸಿಂಧು ಅವರು ಯುವ ಜನತೆಗೆ ಸ್ಪೂರ್ತಿ, ಯುವಕರ ಕಣ್ಮಣಿ. ಭಾರತದ ಬಹುದೊಡ್ಡ ಆಟಗಾರ್ತಿ. ಇಂದು ನಾವೆಲ್ಲರೂ ಹೆಮ್ಮೆಪಡುವ ಕೆಲಸ ಮಾಡಿದ್ದೀರಿ ಎಂದು ಶ್ಲಾಘಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಕೆಯ ಪ್ರಯತ್ನ, ದಣಿವರಿಯದ ಅಭ್ಯಾಸಗಳು ಮತ್ತು ಸಂಪೂರ್ಣ ಪರಿಶ್ರಮದಿಂದ ಸಿಂಧು ಇವತ್ತು ಒಲಿಂಪಿಕ್ ನಲ್ಲಿ ಪದಕ ಗಳಿಸಿದ್ದಾರೆ. ಇದು ಅವರ ಕುಟುಂಬ, ಆಕೆಯ ಕೋಚ್ ಮತ್ತು ಶಾರೀರಿಕ ತರಬೇತುದಾರರ ಬೆಂಬಲದಿಂದ ಕೂಡ ಆಗಿದೆ. ಕಳೆದ ರಿಯೊ ಒಲಿಂಪಿಕ್ ನಲ್ಲಿ ಮತ್ತು ಈ ಬಾರಿ ಟೋಕಿಯೊ ಒಲಿಂಪಿಕ್ ನಲ್ಲಿ ಸಿಂಧು ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದರು.
Advertisement