ಟೋಕಿಯೊ: ಒಲಂಪಿಕ್ಸ್ ಅಥವಾ ಪ್ಯಾರಾಲಿಂಪಿಕ್ಸ್ ನ ಒಂದೇ ಆವೃತ್ತಿಯಲ್ಲಿ ಎರಡು ವೈಯಕ್ತಿಕ ಪದಕ ಗೆದ್ದಿರುವ ಸಾಧನೆಯನ್ನು ಭಾರತದ ಶೂಟರ್ ಅವನಿ ಲೇಖರಾ ಮಾಡಿದ್ದಾರೆ.
ಈ ಮೂಲಕ ಅವನಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಸಂಖ್ಯೆಯನ್ನು 12ಕ್ಕೆ ಏರಿಸಿದ್ದಾರೆ.
ಕುತೂಹಲಕಾರಿ ವಿಷಯವೆಂದರೆ, 1960ರಲ್ಲಿ ಆರಂಭವಾಗಿ 11 ಆವೃತ್ತಿಗಳನ್ನು ಕಂಡಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ 2020 ಟೋಕಿಯೊ ಪ್ಯಾರಾಲಿಂಪಿಕ್ಸ್ ಭಾರತ 12 ಪದಕಗಳನ್ನು ಗೆದ್ದಿದೆ.
ಈ ವಾರದ ಆರಂಭದಲ್ಲಿ ಅವನಿ ಚಿನ್ನ ಗೆದ್ದಿದ್ದರು. ನಂತರ ಇಂದು ಕಂಚಿನ ಪದಕ ಗೆದ್ದು ಬೀಗಿದರು. ಇದಕ್ಕೂ ಮುನ್ನ ಪುರುಷರ ಹೈಜಂಪ್ ಟಿ64 ಫೈನಲ್‌ನಲ್ಲಿ ಕ್ರೀಡಾಪಟು ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದರು.
ಪ್ಯಾಡ್ಲರ್ ಭಾವಿನಾ ಪಟೇಲ್ ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪರ ಮೊದಲ ಪದಕವನ್ನು ಗೆದ್ದಿದ್ದರು. ಅವನಿ, ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಚಿನ್ನ ಗೆದ್ದರೆ, ನಿಶಾದ್ ಕುಮಾರ್, ದೇವೇಂದ್ರ ಜಜಾರಿಯಾ, ಪ್ರವೀಣ್ ಕುಮಾರ್, ಯೋಗೀಶ್ ಕತುನಿಯಾ ಮತ್ತು ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಗೆದ್ದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಂದರ್ ಸಿಂಗ್ ಗುರ್ಜಾರ್, ಸಿಂಘರಾಜ್ ಅಧಾನ ಮತ್ತು ಶರದ್ ಕುಮಾರ್ ಭಾರತಕ್ಕೆ ಕಂಚು ಗೆದ್ದಿದ್ದಾರೆ.
ಮುಂಬರುವ ಸ್ಪರ್ಧೆಗಳಲ್ಲಿಯೂ ಭಾರತೀಯ ತಂಡವು ಹೆಚ್ಚಿನ ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಏಕೆಂದರೆ ಕ್ರೀಡಾಪಟುಗಳು ಟೋಕಿಯೊ ಪ್ಯಾರಾಲಿಂಪಿಕ್ಸ್ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸುವ ಗುರಿ ಹೊಂದಿದ್ದಾರೆ.
Advertisement