ಟೋಕಿಯೊ ಒಲಂಪಿಕ್ಸ್ ಯಶಸ್ಸು: ಭಾರತ ಹಾಕಿ ತಂಡಕ್ಕೆ ಮತ್ತೆ 10 ವರ್ಷಗಳ ಕಾಲ ಒಡಿಶಾ ಸರ್ಕಾರ ಪ್ರಾಯೋಜಕತ್ವ
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಯಶಸ್ಸು ಸಾಧಿಸಿದ್ದು, ಈ ಯಶಸ್ಸಿನ ಬೆನ್ನಲ್ಲೇ ಒಡಿಶಾ ಸರ್ಕಾರ ಇನ್ನು 10 ವರ್ಷಗಳ ಕಾಲ ಪ್ರಾಯೋಜಕತ್ವ ವಿಸ್ತರಿಸಲು ನಿರ್ಧರಿಸಿದೆ.
Published: 18th August 2021 01:05 AM | Last Updated: 18th August 2021 01:11 PM | A+A A-

ಒಡಿಶಾ ಸರ್ಕಾರದಿಂದ 10 ವರ್ಷ ಹಾಕಿ ಪ್ರಾಯೋಜಕತ್ವ
ಭುವನೇಶ್ವರ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಯಶಸ್ಸು ಸಾಧಿಸಿದ್ದು, ಈ ಯಶಸ್ಸಿನ ಬೆನ್ನಲ್ಲೇ ಒಡಿಶಾ ಸರ್ಕಾರ ಇನ್ನು 10 ವರ್ಷಗಳ ಕಾಲ ಪ್ರಾಯೋಜಕತ್ವ ವಿಸ್ತರಿಸಲು ನಿರ್ಧರಿಸಿದೆ.
ಈ ಕುರಿತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರ ಘೋಷಣೆ ಮಾಡಿದ್ದು, ಸದ್ಯ ಪ್ರಾಯೋಜಕತ್ವದ ಅವಧಿ 2023ರವರೆಗೂ ಇದ್ದು, ಅಲ್ಲಿಂದ 10 ವರ್ಷಗಳ ಕಾಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಹಾಕಿ ಇಂಡಿಯಾ ಜತೆಗಿನ ಒಪ್ಪಂದವನ್ನು ಮುಂದುವರಿಸಲಿದ್ದು, ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳ ಆಟಗಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ಹಾಕಿಯಲ್ಲಿ ಗತವೈಭವ ಮರುಕಳಿಸಬೇಕು ಎಂದು ಹಾರೈಸಿದರು.
Glad to felicitate the Indian Women’s and Men's Hockey teams after their historic feat in #Tokyo2020. Proud of the Hockey Olympians for their achievement. May the remarkable journey inspire many others to embrace sports and bring laurels for the country. #OdishaWelcomesOlympians pic.twitter.com/HSg4ZQfduK
— Naveen Patnaik (@Naveen_Odisha) August 17, 2021
ಸನ್ಮಾನ ಸಮಾರಂಭಕ್ಕೂ ಮುನ್ನ ಮೊದಲು ಎರಡು ತಂಡಗಳಿಗೂ ಭರ್ಜರಿ ಸ್ವಾಗತ ನೀಡಲಾಯಿತು. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೋಟೆಲ್‌ವರೆಗೂ ಆಟಗಾರರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಒಡಿಶಾ ಸರ್ಕಾರ 2018ರ ಫೆಬ್ರವರಿಯಿಂದ ಎರಡು ತಂಡಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ಐದು ವರ್ಷಗಳಿಗೆ ಅವಧಿಗೆ 140 ಕೋಟಿ ರೂಪಾಯಿಗೆ ಹಾಕಿ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಮಹಿಳಾ ತಂಡ 4ನೇ ಸ್ಥಾನ ಪಡೆದಿತ್ತು.
ಇದರ ಬೆನ್ನಲ್ಲೇ ಎರಡು ತಂಡಗಳ ಆಟಗಾರರಿಗೆ ನವೀನ್ ಪಟ್ನಾಯಕ್ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಿದರೆ, ತಂಡದ ಸಹಾಯಕ ಸಿಬ್ಬಂದಿಗೆ ತಲಾ 5 ಲಕ್ಷ ರೂಪಾಯಿ ನೀಡಿದರು. ಅಲ್ಲದೆ, ಹಾಕಿ ಇಂಡಿಯಾಗೆ 50 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದರು. ಭಾರತ ತಂಡ ಕಂಚಿನ ಪದಕ ಜಯಿಸಿರುವುದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಉಡುಗೊರೆ ಎಂದು ನಾಯಕ ಮನ್‌ಪ್ರೀತ್ ಸಿಂಗ್ ಇದೇ ವೇಳೆ ಸ್ಮರಿಸಿದರು.