ಟೋಕಿಯೊ ಒಲಿಂಪಿಕ್ಸ್: ವಿದೇಶಿ ಅಥ್ಲೀಟ್ ಸೇರಿದಂತೆ ಮತ್ತೆ 8 ಮಂದಿಗೆ ಕೊರೋನಾ ಸೋಂಕು!
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ 2020ಕ್ಕೆ ಮಾರಕ ಕೊರೋನಾ ಸೋಂಕು ಭೀತಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಮತ್ತೆ ಓರ್ವ ವಿದೇಶಿ ಅಥ್ಲೀಟ್ ಮತ್ತು ಇತರೆ 8 ಮಂದಿಗೆ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.
Published: 20th July 2021 03:11 PM | Last Updated: 20th July 2021 03:38 PM | A+A A-

ಟೋಕಿಯೊ ಒಲಿಂಪಿಕ್ಸ್-ಕೋವಿಡ್ ಸೋಂಕು
ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ 2020ಕ್ಕೆ ಮಾರಕ ಕೊರೋನಾ ಸೋಂಕು ಭೀತಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಮತ್ತೆ ಓರ್ವ ವಿದೇಶಿ ಅಥ್ಲೀಟ್ ಮತ್ತು ಇತರೆ 8 ಮಂದಿಗೆ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.
ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಉಳಿದುಕೊಂಡಿದ್ದ ಚೆಕ್ ಗಣರಾಜ್ಯದ ವಾಲಿಬಾಲ್ ಆಟಗಾರನಿಗೆ ಸೋಂಕು ದೃಢಪಟ್ಟಿದ್ದು ಇದೀಗ ಆತಂಕ ಹೆಚ್ಚಾಗಿದೆ. ಚೆಕ್ ಗಣರಾಜ್ಯದ ವಾಲಿಬಾಲ್ ಆಟಗಾರ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಹೀಗಿದ್ದೂ ಬೀಚ್ ವಾಲಿಬಾಲ್ ಆಟಗಾರನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎರಡನೇ ಚೆಕ್ ಗಣರಾಜ್ಯದ ವ್ಯಕ್ತಿಗೆ ಕೋವಿಡ್ ಪತ್ತೆಯಾದಂತೆ ಆಗಿದೆ. ಈ ಮೊದಲು ಶನಿವಾರ ಜೆಕ್ ಗಣರಾಜ್ಯದ ಸಿಬ್ಬಂದಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.
ಇದನ್ನೂ ಓದಿ: ಒಲಿಂಪಿಕ್ಸ್ 2021: 88 ಭಾರತೀಯ ಕ್ರೀಡಾಪಟುಗಳ ತಂಡ ಟೊಕಿಯೋಗೆ ಆಗಮನ
ಇದಲ್ಲದ ಕ್ರೀಡಾ ಗ್ರಾಮದ ಒಟ್ಟು 8 ಮಂದಿ ಸಿಬ್ಬಂದಿಗಳಿಗೂ ಸೋಂಕು ಒಕ್ಕರಿಸಿದ್ದು, ಎಲ್ಲರನ್ನೂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಎಲ್ಲ ಸಿಬ್ಬಂದಿಗಳು ಕ್ರೀಡಾ ಗ್ರಾಮ ಪ್ರವೇಶಕ್ಕೂ ಮುನ್ನ ಕೋವಿಡ್ ಪರೀಕ್ಷೆಗೊಳಗಾಗಿದ್ದರು. ಈ ವೇಳೆ ಅವರ ವರದಿ ನೆಗೆಟಿವ್ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಸೋಂಕು ದೃಢಪಟ್ಟಿರುವ ಸಿಬ್ಬಂದಿಗಳು ಬ್ರಿಟನ್ ತಂಡದ ಸದಸ್ಯರಲ್ಲ ಎಂದು ಬ್ರಿಟಿಷ್ ಒಲಿಂಪಿಕ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ದಕ್ಷಿಣ ಆಫ್ರಿಕಾದ ಪುರುಷರ 23 ವರ್ಷದೊಳಗಿನ ಫುಟ್ಬಾಲ್ ತಂಡದ ಮೂವರು ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಅಂತೆಯೇ ಸೋಂಕು ದೃಢಪಟ್ಟಿರುವ ಸದಸ್ಯರಾದ ಥಬಿಸೊ ಮೊನ್ಯಾನೆ (ಆಟಗಾರ), ಕಾಮೋಹೆಲೊ ಮಹ್ಲಟ್ಸಿ (ಆಟಗಾರ), ಮತ್ತು ವೀಡಿಯೊ ವಿಶ್ಲೇಷಕ ಮಾರಿಯೋ ಮಾಶಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಟೊಕಿಯೋ ಒಲಿಂಪಿಕ್ಸ್ 2020ಕ್ಕೆ ವ್ಯವಹಾರಿಕ ಹೊಡೆತ, ಜಾಹೀರಾತು ನೀಡದಿರಲು ಟೊಯೋಟಾ ನಿರ್ಧಾರ
ಭಾನುವಾರವಷ್ಟೇ ಕ್ರೀಡಾ ಗ್ರಾಮದಲ್ಲಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಫುಟ್ಬಾಲ್ ಆಟಗಾರರಿಗೆ ಸೋಂಕು ತಗುಲಿತ್ತು. ಇದೇ ವೇಳೆ ಅಮೆರಿಕದ ಜಿಮ್ನಾಸ್ಟಿಕ್ಸ್ ತಂಡದಲ್ಲಿರುವ ಮೀಸಲು ಅಥ್ಲೀಟ್ ಸಹ ಸೋಂಕಿಗೆ ತುತ್ತಾಗಿದ್ದಾರೆ. ಈ ಅಥ್ಲೀಟ್ ಟೋಕಿಯೋದ ಹೋಟೆಲ್‌ವೊಂದರಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಅಮೆರಿಕ ಜಿಮ್ನಾಸ್ಟಿಕ್ ಪಟುವಿಗೆ ಕೋವಿಡ್ ಪಾಸಿಟಿವ್
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಅಮೆರಿಕ ಮಹಿಳಾ ಜಿಮ್ನಾಸ್ಟಿಕ್ ಪಟುವೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಟೋಕಿಯೋ ನಗರದಲ್ಲಿ ಅಭ್ಯಾಸ ನಡೆಸುತ್ತಿದ್ದ ಅಥ್ಲೀಟ್‌ಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದಿಂದ ಒಟ್ಟು ನಾಲ್ವರು ಜಿಮ್ನಾಸ್ಟಿಕ್ ಪಟುಗಳು ಟೋಕಿಯೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ 24 ವರ್ಷದ ಅಮೆರಿಕದ ಸಿಮೊನೆ ಬಿಲಿಸ್ ಮಹಿಳಾ ಜಿಮ್ನಾಸ್ಟಿಕ್‌ನಲ್ಲಿ ಮಿಂಚುತ್ತಿದ್ದಾರೆ. ಇದಷ್ಟೇ ಅಲ್ಲದೇ ಅಮೆರಿಕದಿಂದ 18 ವರ್ಷದ ಸುನಿಸಾ ಲೀ ಮತ್ತು ಗ್ರೇಸ್ ಮೆಕ್ಕಲಂ ಇಬ್ಬರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಿ ಆಗಸ್ಟ್ 08ರವರೆಗೆ ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಜುಲೈ 01ರಿಂದೀಚೆಗೆ ಒಟ್ಟು 58 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಂತೆ ಆಗಿದೆ. ಜುಲೈ 01ರಿಂದ ಇಲ್ಲಿಯವರೆಗೆ ಒಟ್ಟು 22 ಸಾವಿರ ಮಂದಿ ಜಪಾನ್‌ಗೆ ಬಂದಿಳಿದಿದ್ದಾರೆ. ಈ ಪೈಕಿ 4,000 ಮಂದಿ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಒಟ್ಟು 11,000 ಅಥ್ಲೀಟ್‌ಗಳು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.