UNI
ನವದೆಹಲಿ: ಜೂನಿಯರ್ ರೆಜ್ಲರ್ ಸಾಗರ್ ರಾಣಾ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಸಂಬಂಧ ಹೊಂದಿದ್ದಾನೆ ಎಂಬ ಸುಳಿವು ಲಭಿಸಿದ ನಂತರ ಜೂಡೋ ಕೋಚ್ ಸುಭಾಷ್ ಎಂಬವವರನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಒಲಿಂಪಿಯನ್ ಸುಶೀಲ್ ಕುಮಾರ್ ಅವರಿಗೆ ಸುಭಾಷ್ ಜೂಡೋ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್, ಆತನ ಹಲವು ಸಹಚರರು ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇತ್ತೀಚೆಗೆ ಸುಶೀಲ್ ಕುಮಾರ್ ಅವರ ಕಸ್ಟಡಿಯನ್ನು ಜೂನ್ 25ರವರೆಗೆ ವಿಸ್ತರಿಸಿ ದೆಹಲಿ ಮೆಟ್ರೋಪಾಲಿಟನ್ ಕೋರ್ಟ್ ಮ್ಯಾಜಿಸ್ಟ್ರೇಟ್ ರೀಟಾ ಜೈನ್ ಆದೇಶಿಸಿದ್ದರು. ಒಂಬತ್ತು ದಿನಗಳ ಕಸ್ಟಡಿ ಮುಗಿದ ನಂತರ ಪೊಲೀಸರು ಸುಶೀಲ್ ಕುಮಾರ್ ಅವರನ್ನು ಶುಕ್ರವಾರ ಕೋರ್ಟ್ ಮುಂದೆ ಹಾಜರುಪಡಿಸಿದಾಗ, ಬಂಧನವನ್ನು ಜೂನ್ 25 ರವರೆಗೆ ವಿಸ್ತರಿಸಿ ಆದೇಶಿಸಿದ್ದರು. ಸಾಗರ್ ರಾಣಾ ಹತ್ಯೆಗೆ ಸಂಬಂಧಿಸಿದಂತೆ ಸುಶೀಲ್ ಸೇರಿದಂತೆ ಒಟ್ಟು ಹತ್ತು ಮಂದಿಯನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.
ಕಳೆದ ಮೇ 4 ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಕಿರಿಯ ಕುಸ್ತಿಪಟುವನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಸುಶೀಲ್ ಹಾಗೂ ಸಾಗರ್ ನಡುವಣ ನಡೆದ ಘರ್ಷಣೆಯಲ್ಲಿ ಸಾಗರ್ ನನ್ನು ಕೊಲೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.