ಹತ್ತೊಂಬತ್ತರ ತಾಕತ್ತು ಈ ಮೊದಲೂ ಇತ್ತು; ಆದರೆ…

ಅಂಗ ವೈಕಲ್ಯದ ಕುರಿತು ನಮಗಿರುವ ಅನುಕಂಪದ ಜಾಗವನ್ನು ಅಭಿಮಾನವು ಆವರಿಸಿದ ಕಾಲವಿದು. ಹನ್ನೆರಡು ದಿನಗಳ ಕಾಲ ನಡೆದ ಪ್ಯಾರಾಲಂಪಿಕ್ ಕ್ರೀಡಾಕೂಟ ಹಲವಾರು ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿಯಾಯ್ತು.
ಪ್ಯಾರಾಲಂಪಿಕ್ಸ್ ಚಾಂಪಿಯನ್ಸ್ ಜೊತೆ ಮೋದಿ
ಪ್ಯಾರಾಲಂಪಿಕ್ಸ್ ಚಾಂಪಿಯನ್ಸ್ ಜೊತೆ ಮೋದಿ

ಅಂಗ ವೈಕಲ್ಯದ ಕುರಿತು ನಮಗಿರುವ ಅನುಕಂಪದ ಜಾಗವನ್ನು ಅಭಿಮಾನವು ಆವರಿಸಿದ ಕಾಲವಿದು. ಹನ್ನೆರಡು ದಿನಗಳ ಕಾಲ ನಡೆದ ಪ್ಯಾರಾಲಂಪಿಕ್ ಕ್ರೀಡಾಕೂಟ ಹಲವಾರು ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿಯಾಯ್ತು. ಇಲ್ಲಿಯವರೆಗೆ ನಡೆದ ಅಷ್ಟೂ ಪ್ಯಾರಾಲಂಪಿಕ್ ಕ್ರೀಡಾಕೂಟಗಳಲ್ಲಿ ಅತಿ ಹೆಚ್ಚು ಅಂದರೆ 5 ಸ್ವರ್ಣ, 8 ರಜತ, 6 ಕಂಚು ಸೇರಿ ಒಟ್ಟಾರೆ 19 ಪದಕಗಳನ್ನು ಭಾರತ ಕೊರಳಿಗೇರಿಸಿಕೊಂಡಿದ್ದಲ್ಲದೇ 24ನೇ ಸ್ಥಾನದಲ್ಲಿ ಮಿಂಚಿತು. ಪ್ಯಾರಾಲಂಪಿಕ್ ಶುರುವಾಗಿದ್ದು 1960ರಲ್ಲಿ. ಅಲ್ಲಿಂದ 2017ರ ತನಕ ಭಾರತ ಗೆದ್ದ ಒಟ್ಟಾರೆ ಪದಕಗಳು ಕೇವಲ 12.  ಇದೊಂದೇ ಕ್ರೀಡಾಕೂಟದಲ್ಲಿ ಗೆದ್ದಿದ್ದು 19. ಹಾಗಾದರೆ ಬದಲಾಗಿದ್ದು ಏನು? 

130ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇತ್ತಾ ಅಥವಾ ಅವರಿಗೆ ಪೋಷಿಸುವ ವ್ಯವಸ್ಥೆಯಲ್ಲಿ ಹುಳುಕಿತ್ತಾ ಅನ್ನುವುದರ ವಿಶ್ಲೇಷಣೆ ನಡೆಸಲು ಸುಸಮಯವಿದು. ಪ್ರತಿಭೆಯೊಂದನ್ನು ಗುರುತಿಸಿ, ಅಂಥವರಿಗೆ ಬೇಕಾದ ಸವಲತ್ತು, ಉಪಕರಣಗಳನ್ನು ಒದಗಿಸಿ; ಪ್ರತಿಭೆಯನ್ನು ಪೋಷಿಸುವುದರಲ್ಲಿ ಮುಖ್ಯ ಪಾತ್ರ ಯಾರದ್ದು? ಗೆದ್ದಿದ್ದು ಕ್ರೀಡಾಪಟುಗಳು ನಿಜ; ಅದನ್ನು ತಳ್ಳಿಹಾಕುವಂತಿಲ್ಲ. ಅವರ ಶ್ರಮ, ಪ್ರತಿಭೆ ಪ್ರಶ್ನಾತೀತ. ಎಂಥ ಪ್ರತಿಭೆ ಇದ್ದರೂ ಅವಕಾಶ ವಂಚಿತರಾದರೆ, ಅನುಕೂಲಗಳು ಒದಗದೇ ಹೋದರೆ ಮುನ್ನೆಲೆಗೆ ಬರೋದಾದರೂ ಹೇಗಲ್ಲವೇ? ಅದರಲ್ಲೂ ಈ ಬಾರಿ ಮಹಾಮಾರಿ ಕೋವಿಡ್ ಹೆಚ್ಚುವರಿ ತಲೆನೋವು. ಕ್ರೀಡಾಳುಗಳಿಗೆ ಕೋಚಿಂಗ್, ಇನ್ನಿತರೆ ವ್ಯವಸ್ಥೆಯ ಜೊತೆಗೆ, ಲಸಿಕೆ ಇತ್ಯಾದಿಯನ್ನೂ ನೀಡಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಇದೆಲ್ಲವನ್ನೂ ಸರ್ಕಾರ ಅಚ್ಚುಕಟ್ಟಾಗಿ ನಿರ್ವಹಿಸಿತು. 

ಈ ಯಶಸ್ಸಿನ ಬೇರುಗಳು ಇವತ್ತು ನಿನ್ನೆಯದಲ್ಲ; 2014ರಲ್ಲಿ ಹೊಸ ಸರ್ಕಾರ ಬರುತ್ತಲೇ ಒಂದು ಸ್ಕೀಮನ್ನು ಹೊರತಂದರು. ಅದೇ TOPS(TARGET OLYMPIC PODIUM SCHEME). ಈ ಸ್ಕೀಮ್‌ನಡಿಯಲ್ಲಿ ಮೊದಲನೆಯದಾಗಿ ಪ್ರತಿಭೆಗಳನ್ನು ಹೆಕ್ಕಿ ತೆಗೆದು, ಅವರಿಗೆ ಒಳ್ಳೆಯ ತರಬೇತುದಾರರ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ಎರಡನೆಯದಾಗಿ ಕ್ರೀಡಾಪಟುಗಳು ಕೇಳುವ ಸಲಕರಣೆಗಳು, ಕ್ರೀಡಾ ಉಪಕರಣಗಳನ್ನು ಒದಗಿಸಲಾಗುತ್ತದೆ. ಮೂರನೆಯದ್ದು ಓಲಂಪಿಕ್ಕಿಗೆ ಹೋಗುವಾಗ ತರಬೇತುದಾರರ ಜೊತೆಗೆ ಇನ್ನಿತರೇ ಸಹಾಯಕ ಸಿಬ್ಬಂದಿಗಳನ್ನು(ಸೈಕಾಲಾಜಿಸ್ಟ್, ಫಿಸಿಕಲ್ ಟ್ರೇನರ್ ಇತ್ಯಾದಿ) ನಿಯೋಜಿಸಲಾಗುತ್ತದೆ. TOPSನಲ್ಲಿರುವವರಿಗೆ 50000/- ಮಾಸಿಕ ಇನ್ಸೆಂಟಿವನ್ನು ನೀಡಲಾಗುತ್ತದೆ.  ಓಲಂಪಿಕ್ಕಿಗೆ ಹೋದ ಕ್ರೀಡಾಪಟುಗಳಿಗೆ ಹೆಚ್ಚುವರಿ ಅನುದಾನ ನೀಡಲಾಗುತ್ತದೆ. ಅದಲ್ಲದೇ, out of pocket expense ಕೂಡಾ ಒದಗಿಸಿಕೊಡಲಾಗುತ್ತದೆ. TOPS 2016ರಲ್ಲಿ P. V. ಸಿಂಧು ಮತ್ತು ಸಾಕ್ಷಿ ಮಲ್ಲಿಕ್‌ರ ಪದಕಗಳ ಮೂಲಕ ತನ್ನ ಯಶಸ್ಸಿನ ಖಾತೆ ತೆರೆಯಿತು. ಕಾಮನ್‌ವೆಲ್ತ್‌ನಲ್ಲಿ TOPSನಿಂದ ತರಬೇತಿ ಪಡೆದ 70 ಜನರಲ್ಲಿ 47 ಜನ ಪದಕ ಗಳಿಸಿದರು. ಸದ್ಯ 106 ಕ್ರೀಡಾಪಟುಗಳು/ತಂಡಗಳು TOPS ಅಡಿಯಲ್ಲಿ ತರಬೇತಿ ಮತ್ತು ಸವಲತ್ತು ಪಡೆಯುತ್ತಿವೆ. ಅದರ ಯಶಸ್ಸು ಈಗ ಎದ್ದು ಕಾಣುತ್ತಿದೆ. ಓಲಂಪಿಕ್ಕಿನಲ್ಲಿ ಏಳು ಮತ್ತು ಪ್ಯಾರಾಲಂಪಿಕ್ಕಿನಲ್ಲಿ 19 ಪದಕಗಳು TOPSನ ಪರಿಪಕ್ವ ಫಲಗಳಾಗಿವೆ. 

ಈ TOPS ಸ್ಕೀಮಿನಡಿಯಲ್ಲಿ ಬರುವ ಕ್ರೀಡಾಳುಗಳನ್ನು Mission Olympic cell ಹುಡುಕುತ್ತದೆ. ಅಷ್ಟೇ ಅಲ್ಲದೇ, ಈ Cell ಕ್ರೀಡಾಪಟುಗಳ ಸಾಪ್ತಾಹಿಕ ವರದಿಯನ್ನು ಪಡೆದು ಯಾರನ್ನು TOPSನಲ್ಲಿ ಸೇರ್ಪಡೆ ಮಾಡಬೇಕು ಯಾರನ್ನು ತೆಗೆದು ಹಾಕಬೇಕು ಎಂಬುದನ್ನು ನಿರ್ಧರಿಸುತ್ತದೆ ಮತ್ತು ಬೇರುಮಟ್ಟದಲ್ಲಿ "ಖೇಲೋ ಇಂಡಿಯಾ" ಪ್ರಾಜೆಕ್ಟಿನಡಿಯಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಮುಖ್ಯವಾಹಿನಿಗೆ ಇನ್ನೂ ಬಾರದ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತದೆ. 

ಖೇಲೋ ಇಂಡಿಯಾ ಭಾರತದ ಕ್ರೀಡಾ ಜಗತ್ತಿನಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿತೆಂದರೆ ತಪ್ಪಾಗಲಿಕ್ಕಿಲ್ಲ. ಇದರಿಂದಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲ್ಪಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಖೇಲೋ ಇಂಡಿಯಾ ಸ್ಕೂಲ್ ಗೇಮಿನಲ್ಲಿ ಒಟ್ಟಾರೆ 3764 ಜನ ಭಾಗವಹಿಸಿದರೆ 2019-20ರ ಯೂಥ್ ಗೇಮ್ಸಿನಲ್ಲಿ 6000 ಜನ ಭಾಗವಹಿಸಿದ್ದಾರೆ. ಇಲ್ಲಿಯವರೆಗೆ ಭಾರತ ಓಲಂಪಿಕ್ಕಿನಲ್ಲಿ ಗೆಲ್ಲಲು ಇದ್ದ ಮೊದಲ ಅಡ್ಡಿಯೆಂದರೆ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಬಹಳ ಮೊದಲೇನೂ ಬೇಡ; 2008ರಲ್ಲಿ ಕೇವಲ ಐದು ಜನ ಭಾಗವಹಿಸಿದ್ದರು. 2012ರಲ್ಲಿ ಹತ್ತು ಜನ, 2017ರಲ್ಲಿ 19ಜನ, ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಓಲಂಪಿಕ್ಕಿನಲ್ಲಿ 54ಜನ ಭಾಗವಹಿಸಿದ್ದೇ ಅತಿ ಹೆಚ್ಚು. ಈ ಮೊದಲು ಮೇಲ್ಪಂಕ್ತಿಯಲ್ಲಿ ಬಂದವರಿಗೆ ಒಳ್ಳೆಯ ಪ್ರೋತ್ಸಾಹವಿರಲಿಲ್ಲ ಅನ್ನುವ ಮಾತು ಬೇರೆ. ಆದರೆ, ಬೇರುಮಟ್ಟದಲ್ಲಿ ಕ್ರೀಡಾಸ್ಫೂರ್ತಿ ತುಂಬಿ, ಮೇಲ್ಪಂಕ್ತಿಗೆ ತರುವ ಕೆಲಸಗಳೂ ನಡೆಯುತ್ತಿರಲಿಲ್ಲ. ಆ ಕೆಲಸವನ್ನು ಖೇಲೋ ಇಂಡಿಯಾ ಅತ್ಯಂತ ಸಮರ್ಪಕವಾಗಿ ಮಾಡುತ್ತಿದೆ. ಸದ್ಯದ ಮಟ್ಟಿಗೆ ಇದರ ಪರಿಣಾಮ ಅರಿವಿಗೆ ಬರದೇ ಹೋದರೂ ದೀರ್ಘಕಾಲದಲ್ಲಿ ಇದು ದೊಡ್ಡ ಫಲಿತಾಂಶವನ್ನೇ ತಂದುಕೊಡಲಿದೆ. ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ 14 ಕೋಟಿ ಮೀಸಲಿಟ್ಟು, ಒಟ್ಟಾರೆ 143 ಜಿಲ್ಲೆಗಳಲ್ಲಿ excellence centerಗಳನ್ನು ತೆರೆದು, ಕ್ರೀಡಾಳುಗಳಿಗೆ ತರಬೇತಿ ಒದಗಿಸಲಾಗುತ್ತಿದೆ. ಇದರ ಪರಿಣಾಮವಾಗಿ 2018ರ ಯೂಥ್ ಓಲಂಪಿಕ್ಕಿನಲ್ಲಿ 3 ಚಿನ್ನ, 9 ಬೆಳ್ಳಿ, ಒಂದು ಕಂಚು ಸೇರಿ ಒಟ್ಟಾರೆ ಹದಿಮೂರು ಪದಕಗಳನ್ನು ಭಾರತ ಪಡೆಯಿತು. ಇಲ್ಲಿಯವರೆಗಿನ ಯೂಥ್ ಓಲಂಪಿಕ್ಕುಗಳಲ್ಲಿ ಇದು ಅತಿ ದೊಡ್ಡ ಸಾಧನೆ. ಟೋಕಿಯೋ ಒಲಂಪಿಕ್ಕಿನಲ್ಲಿ ಭಾಗವಹಿಸಿದ ಮನು ಭಾಕರ್ ಮತ್ತು ಸೌರಭ್ ಚೌಧರಿ ಇದೇ ಖೇಲೋ ಇಂಡಿಯಾ ಗರಡಿಯ ಸ್ಪರ್ಧಾಳುಗಳು. 2024-28ರ ಓಲಂಪಿಕ್ ಕ್ರೀಡಾಕೂಟಕ್ಕೆ ಹೊಸ ಪ್ರತಿಭೆಗಳನ್ನು ತರುವಲ್ಲಿ ಖೇಲೋ ಇಂಡಿಯಾ, Mission Olympic cell ಮತ್ತು TOPS ಸಾಂಘಿಕ ಪ್ರಯತ್ನ ನಡೆಸುತ್ತಿವೆ. 

ಒಂದು ವೇಳೆ ಖೇಲೋ ಇಂಡಿಯಾದಿಂದ ಯಾವುದೇ ಕ್ರೀಡಾಪಟು ಹೊರಗುಳಿದರೆ ಅಂತಹವರಿಗಾಗಿ sport talent search portal ಮಾಡಲಾಗಿದೆ. ಅದರಲ್ಲಿ ಕ್ರೀಡಾಳುಗಳು ತಮ್ಮ ಪ್ರತಿಭೆಯನ್ನು ದಾಖಲಿಸಿದರೆ SIA(Sports authority of india) ಅವರಿಗೆ ಒಂದು ಅವಕಾಶ ಕೊಡುತ್ತದೆ. ಅದರಲ್ಲಿ ತೇರ್ಗಡೆಯಾದರೆ ಅವರಿಗೆ ಬೇಕಾದ ಸವಲತ್ತು ಕೊಟ್ಟು, ತರಬೇತಿ ನೀಡಲಾಗುತ್ತದೆ. 2017ರ ರಿಯೋ ಓಲಂಪಿಕ್ಕಿನ ಕಳಪೆ ಪ್ರದರ್ಶನದ ನಂತರ ಮುಂದಿನ ಮೂರು ಓಲಂಪಿಕ್ಕಿಗಾಗಿ ಓಲಂಪಿಕ್ ಟಾಸ್ಕ್ ಫೋರ್ಸ್ ತಯಾರು ಮಾಡಲಾಯಿತು. ಅದರಡಿಯಲ್ಲಿ ಪವರ್ ಸ್ಟೇರಿಂಗ್ ಕಮಿಟಿಯನ್ನು ಆಯೋಜಿಸಲಾಗಿತ್ತು. ಆ ಕಮಿಟಿಯೇ ಓಲಂಪಿಕ್ಕಿಗೆ ಭಾರತೀಯರ ಭಾಗವಹಿಸುವಿಕೆಯ ಎಲ್ಲ ಉಸ್ತುವಾರಿ ಯೋಜನೆಗಳನ್ನು ಹೆಣೆದಿತ್ತು. ವಿಕಲ ಚೇತನರಿಗೆಂದೆ "sports and games for persons with disabilities" ಎಂಬ ಸ್ಕೀಮೊಂದನ್ನು ತರಲಾಯಿತು. 

ಕ್ರೀಡೆಗೆಂದು ಮೀಸಲಿಟ್ಟ ಬಜೆಟ್ಟಿನಲ್ಲಿ ಕರೋನಾದ ಕಾರಣಕ್ಕೆ 230 ಕೋಟಿಯನ್ನು ಹಿಂಪಡೆದಿದ್ದೇ ದೊಡ್ಡ ಸುದ್ದಿಯಾಗಿತ್ತು. ಆದರೆ, ಇತಿಹಾಸವನ್ನು ನೋಡಲಾಗಿ: 2012-13ರಲ್ಲಿ 1152ಕೋಟಿ, 2013-14ರಲ್ಲಿ 1219ಕೋಟಿ, 2014-15ರಲ್ಲಿ 1769ಕೋಟಿ, 2017-18ರಲ್ಲಿ 1943ಕೋಟಿ, 2018-19ರಲ್ಲಿ 2197ಕೋಟಿ,  2019-20ರಲ್ಲಿ 2774ಕೋಟಿ, 2020-21ರಲ್ಲಿ 2826ಕೋಟಿ ಮೀಸಲಿಡಲಾಗಿದೆ. ಈ ಬಾರಿ ಕರೋನಾ ಕಾರಣದಿಂದ 2021-22ರಲ್ಲಿ 2596ಕೋಟಿಗೆ ಈ ಬಜೆಟ್ಟನ್ನು ಇಳಿಸಲಾಗಿದೆ. ಮಧ್ಯದ ಕೆಲವು ವರ್ಷಗಳಲ್ಲಿ ಆಗಿನ ಕ್ರೀಡಾಕೂಟಗಳ ಲೆಕ್ಕಾಚಾರದ ಮೇಲೆ ಏರಿಳಿಕೆ ಮಾಡಲಾಗಿದೆ. 

ಇವೆಲ್ಲಾ ಬರೀ ಹೊರನೋಟಗಳಾದರೆ; ಸ್ಪರ್ಧಿಗಳು ಈ ವಿಚಾರದಲ್ಲಿ ಸಂತೃಪ್ತರಿದ್ದಾರಾ ಅಂದರೆ, ಪ್ಯಾರಾಲಂಪಿಕ್ಕಿನ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಶರದ್ ಕುಮಾರ್ "ಓಲಂಪಿಕ್ಕಿಗೆ ಸ್ಪರ್ಧಿಸುವಾಗ ನಮಗೆ ಬೇಕಾಗುವ ಉಪಕರಣ, ಸಲಕರಣೆ ಇತ್ಯಾದಿ ವಸ್ತುಗಳು ಅಧಿಕ ಮೊತ್ತದ್ದಾಗಿರುತ್ತವೆ‌. ಅವುಗಳನ್ನು ಪಡೆಯುವಲ್ಲಿ ಸರ್ಕಾರದ ಸಹಾಯ ಬೇಕೆ ಬೇಕು. ಮೊದಲೆಲ್ಲಾ ನಮ್ಮದೇ ಖರ್ಚಿನಲ್ಲಿ ಹೋಗಬೇಕಾಗಿದ್ದರಿಂದ ಕ್ರೀಡಾಳುಗಳ ಕ್ರೀಡಾಸ್ಫೂರ್ತಿ ಕುಗ್ಗುತ್ತಿತ್ತು; ಈಗ ಹಾಗಲ್ಲ. TOPS ನಮ್ಮ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಿ, ಅವುಗಳ ಆದ್ಯತೆಯನ್ನು ಪರಿಶೀಲಿಸಿ ಪೂರೈಸುತ್ತದೆ. ಆದ್ಯತೆಯ ಮೇರೆಗೆ ಪೂರೈಸುವ ಕಾರಣ ಹಣವೂ ಪೋಲಾಗುವುದಿಲ್ಲ. ಉಳಿದ ಕ್ರೀಡಾಪಟುಗಳಿಗಿಂತ ವಿಕಲ ಚೇತನ ಕ್ರೀಡಾಪಟುಗಳ ಖರ್ಚು-ವೆಚ್ಚ ಹೆಚ್ಚು. ಅವರನ್ನು ಮುನ್ನೆಲೆಗೆ ತರುವಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ವಿಕಲಚೇತನರನ್ನೂ ಮಿಕ್ಕವರಂತೆ ಕಾಣುವುದೇ ಅಲ್ಲವೇ ಸರ್ವತೋಮುಖ ಬೆಳವಣಿಗೆ ಅನ್ನೋದು" ಅಂತ ಹೇಳುತ್ತಾ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. 

ಇದಲ್ಲದೇ, ಪ್ರತಿ ಸ್ಪರ್ಧಾಳುವೂ ಗೆದ್ದಾಗ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸೋದು; ಸೋತವರ ಜೊತೆಗೆ ನಿಂತು ನೈತಿಕ ಬೆಂಬಲ ನೀಡುವ ರೂಢಿಯನ್ನು ಪ್ರಧಾನಿಗಳು ಹಾಕಿಕೊಂಡಿರುವ ಕುರಿತು ಹಲವಾರು ಕ್ರೀಡಾಳುಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಓಲಂಪಿಕ್ಕಿನ ನಂತರ ಎಲ್ಲಾ ಕ್ರೀಡಾಪಟುಗಳನ್ನು ಕರೆದು ಅವರೊಂದಿಗೆ ಐಸ್‌ಕ್ರೀಮ್ ಸವಿದ ಮೋದಿಯವರು ತಾವೇ ಕರೆದುಕೊಂಡ ಪ್ರಧಾನ ಸೇವಕ ಎಂಬ ಪದಕ್ಕೆ ನ್ಯಾಯ ಒದಗಿಸಿದಂತಿತ್ತು. ಹಾಕಿಯಲ್ಲಿ ಸೋತ ತರುಣಿಯರು ಅಳುತ್ತಿರಬೇಕಾದರೆ ಮನೆಯ ಹಿರಿಯನಂತೆ ಅವರಿಗೆ ಸಾಂತ್ವನ ಹೇಳಿದ್ದು ದೇಶದ ಜನರಲ್ಲಿ ಕಣ್ಣೀರು ತರಿಸಿತ್ತು. ಈ ಮೊದಲು ಓಲಂಪಿಕ್ಕಿನಲ್ಲಿ ಪದಕ ಗೆದ್ದವರನ್ನು ಸ್ವಾಗತಿಸಲು ಏರ್‌ಪೋರ್ಟಿನ ತನಕ ಯಾರನ್ನೂ ಕಳಿಸದ ಸರ್ಕಾರವಿದ್ದವು. ಸದ್ಯದ ಸರ್ಕಾರ ಅವರಿಗೊಂದು ಭವ್ಯ ಸ್ವಾಗತ ಕೋರುತ್ತದೆಯಲ್ಲದೇ, ಸ್ವತಃ ಪ್ರಧಾನಿಗಳೇ ಔತಣಕೂಟವನ್ನು ಏರ್ಪಡಿಸುವ ಮಟ್ಟಿಗೆ ಅವರೊಂದಿಗೆ ಸರ್ಕಾರ ನಿಲ್ಲುತ್ತಿದೆ. 

ಏತನ್ಮಧ್ಯೆ, ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಎಲ್ಲಾ ಸ್ಪರ್ಧಿಗಳಿಗೂ ಟ್ವೀಟ್ ಮೂಲಕ ಶುಭಕೋರುವುದನ್ನೂ ಮರೆತು ಹೋದರು. ಸುಮಿತ್ ಅಂಟಿಲ್ ಅವರಿಗೆ ಶುಭಕೋರುತ್ತಾ ರಾಹುಲ್ ಮಾಡಿದ ಟ್ವೀಟ್‌ನ ಫೋಟೋದಲ್ಲಿ ಸುಮಿತ್ ಕೊರಳಿಗೆ ಹಾಕಿದ "ಓಂ" ಎಂಬ ಲಾಕೆಟ್ ಕ್ರಾಪಾಗಿದ್ದು ಹೆಚ್ಚು ವಿವಾದ ಹುಟ್ಟುಹಾಕಿತ್ತು. ಇದು ಮೋದಿಯ ಕಾಲಾವಧಿಯದ್ದು ಹೀಗಾಗಿ ಈ ಯಶಸ್ಸನ್ನು ಸಂಭ್ರಮಿಸಬೇಕಿಲ್ಲ ಅನ್ನಿಸಿದರೆ ಅವರ ಕಾಲಾವಧಿಯ ಸ್ಥಿತಿಗತಿಗಳನ್ನು ತಿಳಿಯಬೇಕಲ್ಲವೇ? 2010ರಲ್ಲಿ ಹಾಕಿ ಪಟು ದೀಪಕ್ ಠಾಕೂರ್ ಒಂದು ಇಂಟರ್‌ವ್ಯೂನಲ್ಲಿ ಮಾತಾಡುತ್ತಾ ಸರ್ಕಾರ ಯಾವುದೇ ಅನುಕೂಲಗಳನ್ನು ಮಾಡಿಕೊಡುತ್ತಿಲ್ಲ, ನಾವು ನಮ್ಮ ಸ್ವಂತ ದುಡ್ಡಿನಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿಷಾದ ವ್ಯಕ್ತಪಡಿಸಿದ್ದರು. ಅದೇ 2021ರಲ್ಲಿ ಸಮರ್‌ಜಿತ್ ಸಿಂಗ್ ಎಂಬ ಕ್ರೀಡಾಪಟು ಸರ್ಕಾರದ ಸಹಾಯದ ಬಗ್ಗೆ ಗುಣಗಾನ ಮಾಡುತ್ತಾ ವಿಡಿಯೋ ಮಾಡಿ ಹರಿಬಿಟ್ಟದ್ದು ವೈರಲ್ ಆಗಿತ್ತು. ಇದಲ್ಲದೇ, 2012 ಸಮ್ಮರ್ ಓಲಂಪಿಕ್ಕಿನಲ್ಲಿ ದೊಡ್ಡ ಅಚಾತುರ್ಯವೊಂದು ನಡೆದಿತ್ತು. ಸ್ಪರ್ಧಾಳುಗಳಿಗೆ ಬೇಕಾದ ಇನ್ನಿತರೆ ಸಹಾಯಕ ಸಿಬ್ಬಂದಿಗಳನ್ನು ಮತ್ತು ತರಬೇತುದಾರರನ್ನು ದೂರವಿರಿಸಿದ್ದರ ಕುರಿತು ಡಿಸ್ಕಸ್ ಥ್ರೋ ಕ್ರೀಡಾಪಟು ಅಮಿತ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದರು. 

ಹತ್ತು ಕ್ರೀಡಾಪಟುಗಳಿಗೆ ಆರೇ ಜನ ತರಬೇತುದಾರರು ಐದು ಜನ ಬೆಂಗಾವಲು ಪಡೆಯವರನ್ನು ನೀಡಲಾಗಿತ್ತು. ಆ ಸಿಬ್ಬಂದಿಗಳಲ್ಲಿ ಇಬ್ಬರಿಗೆ ಮಾತ್ರ ಪಾಸ್ ನೀಡಲಾಗಿತ್ತು. ಪ್ಯಾರಾಲಂಪಿಕ್ ಕಮಿಟಿಯ ಜನರಲ್ ಸೆಕರೆಟರಿ ರತನ್ ಸಿಂಗ್ ತನ್ನ ಮಗನನ್ನು, ಪ್ರೆಸಿಡೆಂಟ್ ತನ್ನ ಹೆಂಡತಿಯನ್ನು, ಟ್ರೆಶರರ್ ತನ್ನ ಹೆಂಡತಿ ಮಕ್ಕಳನ್ನು ಕ್ರೀಡಾಕೂಟಕ್ಕೆ ಕರೆ ತಂದು, ಅವರಿಗೆ ಪಾಸ್ ನೀಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದವು. ಅತ್ತ ಭಾಷಾ ಅನ್ನುವ ವೇಟ್ ಲಿಫ್ಟರ್ ತಮ್ಮನ್ನು ವ್ಹೀಲ್ಲ್ ಚೇರ್ ಮೇಲೆ ಕೂರಿಸಿಕೊಂಡು ಅರ್ಧಕಿಲೋಮೀಟರ್ ದೂರದ ಊಟದ ಹಾಲಿಗೆ ಕರೆದುಕೊಂಡು ಹೋಗಲೂ ಕೂಡಾ ಸಹಾಯಕ ಸಿಬ್ಬಂದಿಗಳಿಲ್ಲದಿರೋದನ್ನು ಹೇಳಿ ಅವಲತ್ತುಕೊಂಡರು. ವಿಶ್ವಮಟ್ಟದಲ್ಲಿ ಇದು ಸುದ್ದಿಯಾದರೂ ಸರ್ಕಾರ ಈ ಕುರಿತು ಗಮನಹರಿಸಲೇ ಇಲ್ಲ. ಅಧಿಕಾರಿಗಳು ಹತ್ತು ಜನ ಸ್ಪರ್ಧಿಗಳಿಗೆ ಆರು ಜನ ಸಿಬ್ಬಂದಿಗಳನ್ನು ಒದಗಿಸಿದ್ದಾರೆ, ಅದರಲ್ಲೆ ನಿರ್ವಹಿಸಿಕೊಂಡು ಹೋಗಬೇಕು ಎಂಬ ಉಡಾಫೆಯ ಉತ್ತರ ಕೊಟ್ಟು ಕೈ ತೊಳೆದುಕೊಂಡರು. ಅದರ ಹಿಂದಿನ ವರ್ಷವಿನ್ನೂ ನಡೆದಿದ್ದ ಕಾಮನ್ ವೆಲ್ತ್ ಹಗರಣದಿಂದಾಗಿ ದೇಶ ಇಡೀ ವಿಶ್ವದ ಮುಂದೆ ತಲೆತಗ್ಗಿಸುವಂತಾಯ್ತು.  

ಇಷ್ಟೆಲ್ಲಾ ನಿರಾಸೆ ಹತಾಶೆಗಳಿಂದ ಬಳಲಿದ ಕ್ರೀಡಾಪಟುಗಳಿಗೆ ಈಗೊಂದು ನೆಮ್ಮದಿಯ ವಾತಾವರಣ ಸಿಕ್ಕಿದೆ. ಸರ್ಕಾರದ ಈ ಇಚ್ಛಾಶಕ್ತಿ ಕುಸಿಯದಿರಲಿ ಎಂದು ಆಶಿಸೋಣ.
ಕ್ರೀಡಾಪಟುಗಳು ಈ ಅವಕಾಶವನ್ನು ಬಳಸಿಕೊಂಡು ವಿಶ್ವದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸುವಂತಾಗಲಿ ಎಂದು ಹಾರೈಸೋಣ.

-ರಾಹುಲ್ ಹಜಾರೆ

rahulhajare9987@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com