ಫಿಫಾ ವಿಶ್ವಕಪ್: ಫೈನಲ್ ನಲ್ಲಿ ಮೆಸ್ಸಿ ಮ್ಯಾಜಿಕ್, ಇಬ್ಬರು ಲೆಜೆಂಡ್ ಗಳ ದಾಖಲೆ ಮುರಿದ ಅರ್ಜೆಂಟಿನಾ ಸೂಪರ್ ಸ್ಟಾರ್

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 36 ವರ್ಷಗಳ ಬಳಿಕ ಅರ್ಜೆಂಟಿನಾ ತಂಡಕ್ಕೆ ವಿಶ್ವಕಪ್ ಕಿರೀಟ ಗೆದ್ದುಕೊಟ್ಟ ಲಿಯೋನಲ್ ಮೆಸ್ಸಿ ಈ ಪಂದ್ಯದ ಮೂಲಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದಿದ್ದಾರೆ.
ಮೆಸ್ಸಿ
ಮೆಸ್ಸಿ
Updated on

ದೋಹಾ: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 36 ವರ್ಷಗಳ ಬಳಿಕ ಅರ್ಜೆಂಟಿನಾ ತಂಡಕ್ಕೆ ವಿಶ್ವಕಪ್ ಕಿರೀಟ ಗೆದ್ದುಕೊಟ್ಟ ಲಿಯೋನಲ್ ಮೆಸ್ಸಿ ಈ ಪಂದ್ಯದ ಮೂಲಕ ಎರಡೆರಡು ವಿಶ್ವದಾಖಲೆಗಳನ್ನು ಮುರಿದಿದ್ದಾರೆ.

ಹೌದು.. ಎರಡು ಬಾರಿಯ ವಿಶ್ವಕಪ್‌ ಚಾಂಪಿಯನ್‌ ಅರ್ಜೆಂಟೀನಾ ತಂಡವನ್ನು 2022ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುನ್ನಡೆಸುತ್ತಿರುವ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ, ಸಾಕಷ್ಟು ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸುವ ಮೂಲಕ ಜರ್ಮನಿಯ ದಿಗ್ಗಜ ಲೋಥರ್‌ ಮಥಾಸ್‌ ಅವರ ಬೃಹತ್‌ ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ. ಲೌಸೇಲ್‌ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ತಂಡದ ಹಾಗೂ ಪಂದ್ಯದ ಮೊದಲ ಗೋಲು ಸಿಡಿಸಿದಾಗಲೇ ಮೆಸ್ಸಿ ಅಪರೂಪದ ವಿಶ್ವದಾಖಲೆಯನ್ನು ಬರೆದರು.

ಫಿಫಾ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಆಡಿದ ಕೇವಲ ಆರು ಪುರುಷ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾ ನಾಯಕ ಮೆಸ್ಸಿ ವಿಶ್ವಕಪ್‌ನ ತಮ್ಮ 26ನೇ ಪಂದ್ಯದಲ್ಲಿ ಅಭೂತಪೂರ್ವ ದಾಖಲೆಯನ್ನು ನಿರ್ಮಿಸಿದ್ದಾರೆ. 35 ವರ್ಷದ ಲಿಯೋನೆಲ್‌ ಮೆಸ್ಸಿ, ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯವಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಆ ಮೂಲಕ ಜರ್ಮನಿಯ ಮತ್ತೊಬ್ಬ ದಿಗ್ಗಜ ತಾರೆ ಮ್ಯಾಥೌಸ್ ಅವರ ವಿಶ್ವದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ.  

ಬಟಿಸ್ಟುಟಾ ದಾಖಲೆಯೂ ಪತನ
ಕ್ರೊವೇಷಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ 3-0 ಗೆಲುವು ಕಂಡಿತ್ತು. 35 ವರ್ಷದ ಲಿಯೋನೆಲ್‌ ಮೆಸ್ಸಿ ಆ ಪಂದ್ಯದಲ್ಲಿ ಅರ್ಜೆಂಟೀನಾ ಪರವಾಗಿ ವಿಶ್ವಕಪ್‌ನಲ್ಲಿ ತಮ್ಮ 11ನೇ ಗೋಲು ದಾಖಲು ಮಾಡಿದ್ದರು. ಆ ಮೂಲಕ ಬಟಿಸ್ಟುಟಾ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಬಟಿಸ್ಟುಟಾ ಕೂಡ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರವಾಗಿ 11 ಗೋಲು ಬಾರಿಸಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ಟೂರ್ನಿಯಲ್ಲಿ ಅರ್ಜೆಂಟೀನಾದ ದಿಗ್ಗಜ ಗ್ಯಾಬ್ರಿಯೆಲ್‌ ಬಟಿಸ್ಟುಟಾಗಿಂತ ಹೆಚ್ಚಿನ ಪಂದ್ಯಗಳನ್ನು ಯಾರೂ ಕೂಡ ಆಡಿರಲಿಲ್ಲ. ಆದರೆ, ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ 7 ಬಾರಿಯ ಬ್ಯಾಲನ್‌ ಡಿ ಓರ್‌ ವಿಜೇತ ಲಿಯೋನೆಲ್‌ ಮೆಸ್ಸಿ ಈ ದಾಖಲೆಯನ್ನು ಮುರಿದಿದ್ದಾರೆ. ಸೆಮಿಫೈನಲ್‌ ಪಂದ್ಯದ ವೇಳೆ ಬಟಿಸ್ಟುಟಾ ಅವರ ದಾಖಲೆಯನ್ನು ಮೆಸ್ಸಿ ಮುರಿದಿದ್ದರು.

ಇದರೊಂದಿಗೆ ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ನಿಮಿಷಗಳ ಕಾಲ ಮೈದಾನದಲ್ಲಿದ್ದ ದಾಖಲೆಯನ್ನು ಮೆಸ್ಸಿ ನಿರ್ಮಿಸಿದ್ದು, ಆ ಮೂಲಕ ಮೆಸ್ಸಿ ಇಟಲಿಯ ದಿಗ್ಗಜ ಪಾವ್ಲೋ ಮಾಲ್ಡಿನಿಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಮಾಲ್ಡಿನಿ 2217 ನಿಮಿಷಗಳ ಕಾಲ ಮೈದಾನದಲ್ಲಿದ್ದರು. ಫಿಫಾ ವಿಶ್ವಕಪ್‌ ಫೈನಲ್‌ ಮೊದಲ ಅವಧಿ ಪೂರ್ತಿ ಮೈದಾನದಲ್ಲಿ ಕಳೆಯುವ ಮೂಲಕ ಈ ವಿಶ್ವದಾಖಲೆಯನ್ನೂ ಮೆಸ್ಸಿ ಮುರಿದಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದ ಮೆಸ್ಸಿ, ಈವರೆಗೂ 19 ಪಂದ್ಯಗಳಲ್ಲಿ ನಾಯಕರಾಗಿ ಆಡಿದ್ದಾರೆ.

ಫಿಫಾ ವಿಶ್ವಕಪ್‌ನ ಪ್ರತಿ ಸುತ್ತಿನಲ್ಲೂ ಗೋಲು ಬಾರಿಸಿದ ಏಕೈಕ ಆಟಗಾರ
ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ದಕ್ಷಿಣ ಅಮೆರಿಕದ ದಿಗ್ಗಜರ ಪೈಕಿ ಮೆಸ್ಸಿ ಮೂರನೇ ಸ್ಥಾನದಲ್ಲಿದ್ದಾರೆ. ರಾಫಾ ಮಾರ್ಕೆಜ್‌ (17) ಹಾಗೂ ಡೀಗೋ ಮರಡೋನಾ (16) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಫೈನಲ್‌ ಪಂದ್ಯದಲ್ಲಿ ಮೊದಲ ಗೋಲು ಸಿಡಿಸುವ ಮೂಲಕ ಹಾಲಿ ವಿಶ್ವಕಪ್‌ನಲ್ಲಿ ಮೆಸ್ಸಿ 6ನೇ ಗೋಲು ಬಾರಿಸಿದಂತಾಗಿದೆ. ಆ ಮೂಲಕ ಅರ್ಜೆಂಟೀನಾದ ನಾಯಕ, ಕತಾರ್‌ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅದರೊಂದಿಗೆ ವಿಶ್ವಕಪ್‌ನ ಪ್ರತಿ ಸುತ್ತಿನಲ್ಲೂ ಗೋಲು ಸಿಡಿಸಿದ ವಿಶ್ವದ ಏಕೈಕ ಆಟಗಾರ ಲಿಯೋನೆಲ್‌ ಮೆಸ್ಸಿ ಆಗಿದ್ದಾರೆ.

ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಮೊದಲಾರ್ಧದ ಮುಕ್ತಾಯಕ್ಕೆ 2-0 ಮುನ್ನಡೆ ಕಂಡಿದೆ. ಆ ಮೂಲಕ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೋಲು ಕಂಡರೂ ಚಾಂಪಿಯನ್‌ ಆದ ಕೇವಲ 2ನೇ ತಂಡ ಎನಿಸಿಕೊಳ್ಳುವ ಹಾದಿಯಲ್ಲಿದೆ. 2010ರ ಫಿಫಾ ವಿಶ್ವಕಪ್‌ನಲ್ಲಿ ಸ್ಪೇನ್‌ ತಂಡ ಕೂಡ ಮೊದಲ ಪಂದ್ಯದಲ್ಲಿ ಸೋಲು ಕಂಡು ಬಳಿಕ ಚಾಂಪಿಯನ್‌ ಆಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com