ಫಿಫಾ ವಿಶ್ವಕಪ್‌‌ನಲ್ಲಿ ಮತ್ತೊಂದು ವಿವಾದ; ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್, ಕಾರಣ ಹಿಜಾಬ್!!

ಕತಾರ್ ನಲ್ಲಿ ಆರಂಭವಾಗಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಇಂದು ಮತ್ತೊಂದು ವಿವಾದಕ್ಕೆ ವೇದಿಕೆಯಾಗಿದ್ದು, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲು ಇರಾನ್ ತಂಡದ ಆಟಗಾರರು ನಿರಾಕರಿಸಿದ್ದಾರೆ.
ಇರಾನ್ ಫುಟ್ಬಾಲ್ ತಂಡ
ಇರಾನ್ ಫುಟ್ಬಾಲ್ ತಂಡ

ಕತಾರ್‌: ಕತಾರ್ ನಲ್ಲಿ ಆರಂಭವಾಗಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಇಂದು ಮತ್ತೊಂದು ವಿವಾದಕ್ಕೆ ವೇದಿಕೆಯಾಗಿದ್ದು, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲು ಇರಾನ್ ತಂಡದ ಆಟಗಾರರು ನಿರಾಕರಿಸಿದ್ದಾರೆ.

ಹೌದು.. ಈ ಬಾರಿಯ ಫಿಫಾ ವಿಶ್ವಕಪ್ ಆಯೋಜನೆ, ಫುಟ್ಬಾಲ್ ಮಂಡಳಿಗೆ ಮತ್ತು ಆಯೋಜಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಟೂರ್ನಿ ಒಂದರ ಮೇಲೊದಂರಂತೆ ವಿವಾದಲ್ಲಿ ಸಿಲುಕುತ್ತಿದ್ದು, ಟೂರ್ನಿಯಲ್ಲಿ ಇದೀಗ ಹೊಸ ವಿವಾದ ತಲೆದೋರಿದೆ. ಇಂಗ್ಲೆಂಡ್ ಹಾಗೂ ಇರಾನ್ ನಡುವಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ವಿವಾದ ಹುಟ್ಟಿಕೊಂಡಿದೆ. ಇರಾನ್ ಆಟಾಗರರು ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದೇ ಈ ವಿವಾದಕ್ಕೆ ಕಾರಣವಾಗಿದೆ.

ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ದ ಪ್ರತಿಭಟನೆ ಬೆಂಬಲಿಸಿರುವ ಇರಾನ್ ಫುಟ್ಬಾಲ್ ತಂಡ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಫುಟ್ಬಾಲ್ ನಾಯಕ ಅಲಿರೆಜಾ ಜಹಾನ್‌ಬಕ್ಷ್, ನಾವು ರಾಷ್ಟ್ರಗೀತೆ ಹಾಡದಿರಲು ನಿರ್ಧರಿಸಿದ್ದೇವೆ. ಇರಾನ್‌ನನಲ್ಲಿ ನಡೆಯತ್ತಿರುವ ಪ್ರತಿಭಟನೆ ಬೆಂಬಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅಲಿರೆಜಾ ಹೇಳಿದ್ದಾರೆ.

ಕತಾರ್ ಗೆ ತಲೆನೋವು
ಇನ್ನು ಇರಾನ್ ತಂಡದ ಈ ನಡೆ ವಿಶ್ವಕಪ್ ಟೂರ್ನಿ ಆತಿಥ್ಯ ವಹಿಸಿರುವ ಕತಾರ್ ತಲೆನೋವು ತಂದಿದ್ದು, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ಧದ ಪ್ರತಿಭಟನೆಗೆ ಆಟಗಾರರು ರಾಷ್ಟ್ರಗೀತೆ ಹಾಡದೆ ಪ್ರತಿಭಟನೆ ಮಾಡಿದರೆ ಖತಾರ್ ಬೆಂಬಲಿಸಿದ ರೀತಿ ಆಗಲಿದೆ. ಮಾತ್ರವಲ್ಲದೇ ಆಟಗಾರರ ಈ ನಡೆ ಫಿಫಾ ಆಡಳಿತ ಮಂಡಳಿಗೂ ತಲೆನೋವು ತಂದಿದ್ದು, ಮಂಡಳಿಯಲ್ಲೇ ಪರ-ವಿರೋಧ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇರಾನ್ ರಾಜಧಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸ್ ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇರಾನ್ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿ ಮೂರು ತಿಂಗಳೂ ಕಳೆದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com