ಆತುರದ ನಿರ್ಧಾರ ಕೈಗೊಳ್ಳಬೇಡಿ: ಕುಸ್ತಿಪಟುಗಳಿಗೆ ಭಾರತದ 1983 ವಿಶ್ವಕಪ್‌ ವಿಜೇತ ಕ್ರಿಕೆಟ್‌ ತಂಡ ಮನವಿ

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು
ಪ್ರತಿಭಟನಾ ನಿರತ ಕುಸ್ತಿಪಟುಗಳು

ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ  ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ದಾರೆ. ಈ ಕುರಿತಾಗಿ ಕುಸ್ತಿಪಟುಗಳು ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು 1983 ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಸದಸ್ಯರು ಹೇಳಿದ್ದಾರೆ.

ನಮ್ಮ ಚಾಂಪಿಯನ್‌ ಕುಸ್ತಿಪಟುಗಳೊಂದಿಗೆ ಹೇಗೆ ವರ್ತಿಸಲಾಗುತ್ತಿದೆ ಎಂಬುದನ್ನು ನೋಡಿ ನಮಗೆ ಬಹಳ ಬೇಸರವಾಗಿದೆ. ಅವರು ತಾವು ಕಷ್ಟ ಪಟ್ಟು ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಯೋಚಿಸುತ್ತಿದ್ದಾರೆಂದು ತಿಳಿದು ಇನ್ನಷ್ಟು ಬೇಸರವಾಗಿದೆ ಎಂದು 1983 ವಿಶ್ವ ಕಪ್‌ ವಿಜೇತ ತಂಡ ಹೇಳಿದೆ.

ಆ ಪದಕಗಳನ್ನು ಬಹಳ ವರ್ಷಗಳ ಪರಿಶ್ರಮ ಹಾಗೂ ಸಾಧನೆಯಿಂದ ಗಳಿಸಲಾಗಿದೆ. ಅವುಗಳು ಅವರ ಸ್ವಂತದ್ದು ಮಾತ್ರವಲ್ಲ, ಬದಲು ದೇಶದ  ಹೆಮ್ಮೆಯಾಗಿವೆ. ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಹಾಗೂ ಅವರ ದೂರುಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಲಾಗುವುದೆಂಬ ಆಶಾವಾದ ಹೊಂದಿದ್ದೇವೆ ಎಂದು ಹೇಳಿಕೆ ತಿಳಿಸಿದೆ.

ದೇಶದ ಕ್ರಿಕೆಟ್‌ ತಂಡ 1983ರಲ್ಲಿ ತನ್ನ ಚೊಚ್ಚಲ ವಿಶ್ವ ಕಪ್‌ ಅನ್ನು ಕಪಿಲ್‌ ದೇವ್‌ ನಾಯಕತ್ವದಲ್ಲಿ ಗೆದ್ದಿತ್ತು. ಆ ತಂಡದಲ್ಲಿ ಸುನೀಲ್‌ ಗಾವಸ್ಕರ್‌, ಮೊಹಿಂದರ್‌ ಅಮರ್‌ನಾಥ್‌, ಕೆ ಶ್ರೀಕಾಂತ್‌, ಸಯ್ಯದ್‌ ಕೀರ್ಮಾನಿ, ಯಶ್ಪಾಲ್‌ ಶರ್ಮ, ಮದನ್‌ ಲಾಲ್‌, ಬಲ್ವಿಂದರ್‌ ಸಿಂಗ್‌ ಸಂಧು, ಸಂದೀಪ್‌ ಪಾಟೀಲ್‌, ಕೀರ್ತಿ ಆಜಾದ್‌, ಮತ್ತು ರೋಜರ್‌ ಬಿನ್ನಿ ಇದ್ದರು. ಅಂತಿಮ ಪಂದ್ಯ ಲಾರ್ಡ್ಸ್‌ ಮೈದಾನದಲ್ಲಿ ಜೂನ್‌ 25, 1983ರಂದು ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com