ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ದ 4-0 ಅಂತರಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದು, 3 ಬಾರಿಯ ಚಾಂಪಿಯನ್ ತಂಡವನ್ನು ಟೂರ್ನಿಯಿಂದಲೇ ಹೊರದಬ್ಬಿದೆ.
ಇಂದು ಚೆನ್ನೈನಲ್ಲಿ ನಡೆದ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ದ 4-0 ಅಂತರಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದು, ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲು ಸಿಡಿಸಿದರೆ, ಜುಗರಾಜ್ ಸಿಂಗ್ ಹಾಗೂ ಅಕ್ಷದೀಪ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ ಅದ್ಧೂರಿ ಗೆಲುವಿನ ಸಂಭ್ರಮ ಆಚರಿಸಿತು.
ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ ಆರಂಭದಿಂದಲೇ ನಿಯಂತ್ರಣ ಸಾಧಿಸಿತ್ತು. ಪಾಕಿಸ್ತಾನಕ್ಕೆ ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ. ಆರಂಭಿಕ 12 ನಿಮಿಷದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಭಾರತ ಹಾಗೂ ಪಾಕಿಸ್ತಾನ ಡೆಫೆನ್ಸ್ ಆಟಕ್ಕೆ ಹೆಚ್ಚು ಒತ್ತು ನೀಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದರಿಂದ ಭಾರತ ಖಾತೆ ತೆರೆಯಿತು. ಮರುಕ್ಷಣದಲ್ಲೇ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇತ್ತ ಪಾಕಿಸ್ತಾನ ಗೋಲು ಸಿಡಿಸುವ ಪ್ರಯತ್ನ ಮಾಡಿದರೂ, ಭಾರತದ ಭದ್ರಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. 23ನೇ ನಿಮಿಷದಲ್ಲಿ ಜುಗರಾಜ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ 3-0 ಅಂತರ ಕಾಪಾಡಿಕೊಂಡಿತು.
ಅಂತಿಮ ಹಂತದಲ್ಲಿ ಮನ್ದೀಪ್ ಸಿಂಗ್ ನೀಡಿದ ಅತ್ಯತ್ತಮ ಪಾಸನ್ನು ಅಕ್ಷದೀಪ್ ಸಿಂಗ್ ಗೋಲಾಗಿ ಪರಿವರ್ತಿಸಿ ಭಾರತ 4-0 ಅಂತರದ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ ಗೆಲುವಿನ ಸಂಭ್ರಮ ಆಚರಿಸಿತು. ಏಷ್ಯನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತ ಸೋಲಿಲ್ಲದ ಸರದಾರನಾಗಿ ಸೆಮಿಫೈನಲ್ ಪ್ರವೇಶ ಪಡೆಯಿತು.
3 ಬಾರಿಯ ಚಾಂಪಿಯನ್ ಟೂರ್ನಿಯಿಂದಲೇ ಔಟ್
ಇತ್ತ ಹೀನಾಯ ಸೋಲು ಕಂಡ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದೆ. ಏಷ್ಯನ್ ಚಾಂಪಿಯನ್ ಟ್ರೋಫಿ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದವು. ಸಾಂಪ್ರದಾಯಿಕ ಎದುರಾಳಿಗಳು ಇಲ್ಲಿಯವರೆಗೆ ತಲಾ 3 ಪ್ರಶಸ್ತಿಗಳನ್ನು ಗೆದ್ದಿವೆ.
ಪ್ರಸಕ್ತ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತಕ್ಕೆ ಇದು ನಾಲ್ಕನೇ ಗೆಲುವಾಗಿದೆ. ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಬಳಗ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ ಹೋರಾಟ ನಡೆಸಲಿದೆ. ಇನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ಹಾಗೂ ಮಲೇಷಿಯಾ ಹೋರಾಟ ನಡೆಸಲಿದೆ.
ಭಾರತ ಹಾಗೂ ಪಾಕಿಸ್ತಾನ ಹಾಕಿಯಲ್ಲಿಯೂ ಬದ್ಧ ಎದುರಾಳಿಗಳು ಎನಿಸಿಕೊಂಡಿದೆ. 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಹಾಕಿಯಲ್ಲಿ ಪರಸ್ಪರ ಮುಖಾಮುಖಿಯಾದ ಈ ಎರಡು ತಂಡಗಳ ಪೈಕಿ ಒಟ್ಟಾರೆಯಾಗೊ ನೋಡಿದರೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಪಾಕಿಸ್ತಾನ ಭಾರತದ ವಿರುದ್ಧ 82 ಪಂದ್ಯಗಳನ್ನು ಗೆದ್ದಿದ್ದರೆ ಭಾರತದ 64 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 32 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತವು ಪಾಕಿಸ್ಥಾನ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ತನ್ನ ಕೊನೆಯ 14 ಮುಖಾಮುಖಿಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅಜೇಯವಾಗಿಯೇ ಉಳಿದುಕೊಂಡಿದೆ.
Advertisement