ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ 100ಗ್ರಾಂ ತೂಕ ಹೆಚ್ಚಾದ ಕಾರಣ ಅನರ್ಹಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ತೂಕ ಇಳಿಕೆಗಾಗಿ ಇಡೀ ರಾತ್ರಿ ನೀರು ಸೇವಿಸದೇ ವರ್ಕೌಟ್ ಮಾಡಿದ ಕಾರಣ ವಿನೇಶ್ ಫೋಗಟ್ ದೇಹದ ತೀವ್ರ ನಿರ್ಜಲೀಕರಣ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷೆ ಪಿ.ಟಿ ಉಷಾ ಮಾಹಿತಿ ನೀಡಿದ್ದು, ದೇಹದ ತೀವ್ರ ನಿರ್ಜಲೀಕರಣದಿಂದಾಗಿ ಸುಸ್ತಾಗಿದ್ದ ವಿನೇಶ್ ಫೋಗಟ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೀಡಾಕೂಟದ ವಿಲೇಜ್ ಪಾಲಿಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು IV ದ್ರಾವಣ ನೀಡಿದ್ದಾರೆ.
ನಾವು ಸ್ಥಳೀಯ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯನ್ನು ಸಹ ಮಾಡಿಸಿದ್ದೇವೆ. ವರದಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. "ಈ ಪ್ರಕ್ರಿಯೆಯ ಉದ್ದಕ್ಕೂ ವಿನೇಶ್‌ರ ಎಲ್ಲಾ ನಿಯತಾಂಕಗಳು (parameters) ಸಾಮಾನ್ಯವಾಗಿದ್ದವು. ಆಕೆ ಆರೋಗ್ಯವಾಗಿದ್ದಾಳೆ ಎಂದು ಹೇಳಿದ್ದಾರೆ.
ಅಂತೆಯೇ ಆಸ್ಪತ್ರೆಗೆ ತೆಳಿದ್ದ ಪಿಟಿ ಉಷಾ ಅವರು ವಿನೇಶ್ ರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಬಳಿಕ ಚರ್ಚೆ ನಡೆಸಿದ್ದಾರೆ. ವಿನೇಶ್ ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸಂಪೂರ್ಣವಾಗಿ ಸಾಮಾನ್ಯವಾಗಿದ್ದರೂ, ಅವರ ಅನರ್ಹತೆಯಿಂದ ಅವರು ನಿರಾಶೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದಿಂದ ದೂರು ದಾಖಲು
ವಿನೇಶ್ ಫೋಗಟ್ ಅವರನ್ನು ಅನರ್ಹ ಮಾಡಿದ ಕುರಿತು ಭಾರತದ ನಿಯೋಗದಿಂದ ದೂರು ದಾಖಲಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು, ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ದೂರು ದಾಖಲಿಸಿದ್ದೇವೆ. ಸ್ಪರ್ಧೆಯ ನಂತರ ಕೆಲವೊಮ್ಮೆ ಮರುಕಳಿಸುವ ತೂಕ ಹೆಚ್ಚಾಗುತ್ತದೆ ಎಂದು ಭಾರತೀಯ ಒಲಿಂಪಿಕ್ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement