ಪ್ಯಾರಿಸ್: ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ಗೂ ಮುನ್ನ ಅಧಿಕ ತೂಕ ಹೊಂದಿದ್ದ ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದು, ಇದರಿಂದ ತಮಗೆ ತುಂಬಾ ದುಃಖವಾಗಿದೆ ಎಂದು ಅಂತರಾಷ್ಟ್ರೀಯ ಕುಸ್ತಿ ಫೆಡರೇಷನ್(ಯುಡಬ್ಲ್ಯೂಡಬ್ಲ್ಯು) ಅಧ್ಯಕ್ಷ ನೆನಾದ್ ಲಾಲೋವಿಕ್ ಅವರು ಹೇಳಿದ್ದಾರೆ.
ಬುಧವಾರ ಪ್ಯಾರಿಸ್‌ನ ಚಾಂಪ್ಸ್-ಡಿ-ಮಾರ್ಸ್ ಅರೆನಾದಲ್ಲಿ ಕುಸ್ತಿ ಪಂದ್ಯಗಳ ಮೊದಲ ಸೆಷನ್ ಮುಗಿದ ನಂತರ ಲಾಲೋವಿಕ್ ಕೆಲವು ಭಾರತೀಯ ಪತ್ರಕರ್ತರೊಂದಿಗೆ ಮಾತನಾಡಿದರು. ನಿಯಮಗಳು ಎಲ್ಲರಿಗೂ ಒಂದೇ. ಅದನ್ನು ಗೌರವಿಸಬೇಕು ಮತ್ತು ಈಗ ಫೋಗಟ್ ಅವರ ಅನರ್ಹತೆಯ ಬಗ್ಗೆ ಏನನ್ನೂ ಮಾಡಲಾಗುವುದಿಲ್ಲ ಎಂದಿದ್ದಾರೆ.
"ನೀವು ನಿಯಮಗಳನ್ನು ಗೌರವಿಸಬೇಕು, ಫೋಗಟ್ ಅವರಿಗೆ ಈ ರೀತಿ ಆಗಿರುವುದು ನನಗೆ ತುಂಬಾ ದುಃಖವಾಗಿದೆ. ತೂಕವು ಸಾರ್ವಜನಿಕವಾಗಿದೆ(ಇದು ರೆಕಾರ್ಡ್ ಆಗುತ್ತದೆ) ಮತ್ತು ಎಲ್ಲಾ ಇತರ ಕುಸ್ತಿಪಟುಗಳು ಅಲ್ಲಿರುತ್ತಾರೆ. ಪದಕ ಸುತ್ತಿಗೆ ಹೋಗುವ ಪ್ರತಿಯೊಬ್ಬರಿಗೂ ಅವರ ತೂಕವನ್ನು ಮತ್ತೊಮ್ಮೆ ಪರೀಕ್ಷಿಸುತ್ತಾರೆ ಎಂದು ಅವರು ಹೇಳಿದರು.
ವಿನೇಶ್ ಫೋಗಟ್ ಅವರು ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಇದ್ದರು. ಫೋಗಟ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಆಕೆಯ ತೂಕ 50 ಕೆಜಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ತೀರ್ಪುಗಾರರ ಮುಂದೆಯೇ ತೂಕ ಪರೀಕ್ಷಿಸಲಾಗುತ್ತದೆ ಎಂದರು.
“ನಾವು ತೂಕದ ವಿಷಯದಲ್ಲಿ ಹೆಚ್ಚು ಕಟ್ಟುನಿಟ್ಟಾಗಿರಬೇಕು. ಕುಸ್ತಿಪಟುಗಳು ಹೆಚ್ಚು ತೂಕ ಕಳೆದುಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಮತ್ತು ಅದು ಅವರಿಗೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅನೇಕರು ಆ ಕ್ಷಣದಲ್ಲಿ ಏನ ಸಿಗುತ್ತದೆ ಎಂಬುದನ್ನು ನೋಡುತ್ತಾರೆ. ಆದರೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಅವರು ಯೋಚಿಸುವುದಿಲ್ಲ ಎಂದು ಲಾಲೋವಿಕ್ ಅವರ ಹೇಳಿದ್ದಾರೆ.
ಕ್ರೀಡಾಪಟುಗಳು ತಮ್ಮ ಸಹಜ ತೂಕದಲ್ಲಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ. "ದುರದೃಷ್ಟವಶಾತ್ ಇಲ್ಲಿ ಈ ರೀತಿ ನಡೆದ ಎರಡನೇ ಪ್ರಕರಣ ಇದಾಗಿದೆ. ಹಿಂದಿನ ಪ್ರಕರಣ ಪದಕ ಸುತ್ತಿನಲ್ಲಿ ಇರಲಿಲ್ಲ. ಹೀಗಾಗಿ ಅದು ಹೆಚ್ಚು ಮಹತ್ವ ಪಡೆದುಕೊಳ್ಳಲಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾನು ವಿನೇಶ್ ಫೋಗಟ್ ಅವರ ಪ್ರಯಾಣವನ್ನು ಗಮನಿಸಿದ್ದೇನೆ. ಆದರೆ ಇದು ಭಾರತವನ್ನು ಒಳಗೊಂಡಿರುವ ಕಾರಣ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದರು.
ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಾಲೋವಿಕ್ ಅವರು, ಇಲ್ಲ ಇದರಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಬೆಳ್ಳಿ ಪದಕವನ್ನು ನೀಡುವುದು ಅಸಾಧ್ಯ. ನಾವು ನಿಯಮಗಳನ್ನು ಗೌರವಿಸಬೇಕು ಎಂದರು.
Advertisement