ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಪದಕದ ಮೇಲೆ ಕಣ್ಣಿಟ್ಟಿರುವ ಭಾರತದ ನೀರಜ್ ಛೋಪ್ರಾ ಚಿನ್ನದ ಪದಕ ಗೆದ್ದರೆ ಕ್ಯಾಶ್ ರಿವಾರ್ಡ್ (Cash Reward) ನೀಡುವುದಾಗಿ ಭಾರತದ ಕ್ರಿಕೆಟರ್ ರಿಷಬ್ ಪಂತ್ (Rishabh Pant) ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ.
ಹೌದು.. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಚಿನ್ನದ ಪದಕ ಗೆಲ್ಲುವ ಅಭೂತಪೂರ್ವ ಸಾಧನೆಯತ್ತ ನೀರಜ್ ಚೋಪ್ರಾ ಹೆಜ್ಜೆ ಇಟ್ಟಿದ್ದು, ಹಾಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿರುವ ನೀರಜ್, 89.34 ಮೀ. ದೂರಕ್ಕೆ ಭರ್ಜಿ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಆ ಮೂಲಕ ಭಾರತದ ಚಿನ್ನದ ಪದಕದ ಕನಸನ್ನು ನೀರಜ್ ಜೀವಂತವಾಗಿರಿಸಿದ್ದಾರೆ.
ಏತನ್ಮಧ್ಯೆ ಇದೇ ವಿಚಾರವಾಗಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಅದೃಷ್ಟಶಾಲಿ ಅಭಿಮಾನಿ ಒಬ್ಬನಿಗೆ 100,089 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ರಿಷಬ್ ಪಂತ್ ಮಾಹಿತಿ ಹಂಚಿಕೊಂಡಿದ್ದು, "ಒಂದು ವೇಳೆ ನೀರಜ್ ಚೋಪ್ರಾ ನಾಳೆ ಚಿನ್ನದ ಪದಕ ಗೆದ್ದರೆ, ನಾನು ಒಬ್ಬ ಅದೃಷ್ಟಶಾಲಿ ಅಭಿಮಾನಿಗೆ 100,089 ರೂಪಾಯಿ ನೀಡುತ್ತೇನೆ. ಅದಕ್ಕಾಗಿ ಆತ ಈ ಪೋಸ್ಟ್‌ನ ಲೈಕ್ ಮಾಡಿ ಹೆಚ್ಚು ಕಾಮೆಂಟ್ ಮಾಡಿರಬೇಕು. ಆ ಅದೃಷ್ಟ ಶಾಲಿ ಹೊರತಾಗಿ ಹೆಚ್ಚು ಕಾಮೆಂಟ್ ಮಾಡಿ ಗೆಲ್ಲಲು ಪ್ರಯತ್ನಿಸಿದ 10 ಅಭಿಮಾನಿಗಳಿಗೆ ಫ್ಲೈಟ್ ಟಿಕೆಟ್ಸ್ ನೀಡುತ್ತೇನೆ. ಭಾರತ ಮತ್ತು ಭಾರತದಿಂದ ಆಚೆಯಿಂದಲೂ ಬೆಂಬಲಿಸೋಣ," ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಸಕ್ತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ ಕೇವಲ 3 ಕಂಚಿನ ಪದಕಗಳನ್ನು ಮಾತ್ರ ಗೆದ್ದಿದೆ. ಪದಕ ಸಂಖ್ಯೆ ಹೆಚ್ಚಿಸುವ ಭರವಸೆಯ ಅಥ್ಲೀಟ್‌ಗಳ ಪೈಕಿ ನೀರಜ್ ಚೋಪ್ರಾ ಕೂಡ ಒಬ್ಬರು. ಆಗಸ್ಟ್ 8ರಂದು ಅಂದರೆ ಇಂದು ಒಲಿಂಪಿಕ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ನಡೆಯಲಿದ್ದು, ನೀರಜ್ ಚೋಪ್ರಾಗೆ ಎಲ್ಲರೂ ಬೆಂಬಲಿಸೋಣ ಎಂದು ರಿಷಭ್ ಪಂತ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಅಂದಹಾಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್, ಒಲಿಂಪಿಕ್ಸ್‌ನ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಸಾಧನೆ ಮರೆದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಶೂಟಿಂಗ್ ಸ್ಪರ್ಧೆಯಿಂದ ಒಟ್ಟು 3 ಕಂಚಿನ ಪದಕಗಳು ಬಂದಿವೆ.
25 ಮೀ. ವೈಯಕ್ತಿಕ ಮತ್ತು ಮಿಶ್ರ ವಿಭಾಗಗಳಲ್ಲಿ ಮನು ಭಾಕರ್ 2 ಕಂಚಿನ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಸ್ವಪ್ನಿಲ್ ಕುಸಾಲೆ 50 ಮೀ. ರೈಫಲ್ ಶೂಟಿಂಗ್‌ನಲ್ಲಿ ಮತ್ತೊಂದು ಕಂಚು ಗೆದ್ದುಕೊಟ್ಟರು. ಮನುಭಾಕರ್ ವೈಯಕ್ತಿಕ ಕಂಚಿನ ಜೊತೆಗೆ ಸಬರ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
Advertisement