ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದ್ದು, ಪುರುಷರ ಹಾಕಿಯಲ್ಲಿ ಸ್ಪೇನ್ ತಂಡವನ್ನು ಮಣಿಸಿದ ಭಾರತ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.
ಪ್ಯಾರಿಸ್ ಒಲಿಂಪಿಕ್ಸ್ನ (Paris Olympics 2024) ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ತಂಡ ಹಾಕಿಯಲ್ಲಿ ಕಂಚಿನ ಪದಕ ಗೆದ್ದಿದೆ. ಸ್ಪೇನ್ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಒಲಿಂಪಿಕ್ಸ್ನ ಕಂಚಿನ ಪದಕ ಉಳಿಸಿಕೊಂಡಿದೆ.
ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಎರಡೂ ತಂಡಗಳು ಗೋಲ್ ರಹಿತ ಆಟವನ್ನು ಆಡಿತು. ಆದರೆ, 2ನೇ ಕ್ವಾರ್ಟರ್ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್ ಮುನ್ನಡೆಯನ್ನು ಪಡೆದುಕೊಂಡಿತು.
ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಸಮಬಲಗೊಳ್ಳುವಂತೆ ಮಾಡಿದರು. ಮೂರನೇ ಕ್ವಾರ್ಟರ್ನಲ್ಲಿ ಮತ್ತೊಂದು ಗೋಲ್ ಬಾರಿಸಿ ಅವರು ಮುನ್ನಡೆ ತಂದುಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ತಂಡ ಗೆಲುವು ಸಾಧಿಸಿತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ 41 ವರ್ಷಗಳ ಬಳಿಕ ಅಮೋಘ ಸಾಧನೆ ಮಾಡಿತ್ತು. ಅದೇ ಸಾಧನೆಯನ್ನು ಮತ್ತೆ ಪುನರಾವರ್ತನೆ ಮಾಡಿದೆ. ಒಲಿಂಪಿಕ್ ಹಾಕಿ ಇತಿಹಾಸದಲ್ಲಿ ಭಾರತ ಪುರುಷರ ತಂಡವು ಎಂಟು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. ಕೊನೆಯ ಚಿನ್ನದ ಪದಕ 1980ರಲ್ಲಿ ಬಂದಿತ್ತು. ನಂತರ ತಂಡವು 41 ವರ್ಷಗಳ ಪದಕ ಬರವನ್ನು ಎದುರಿಸಿತ್ತು. ಟೋಕಿಯೊದಲ್ಲಿ ನಡೆದ 2020 ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.
ಗೋಲ್ ಕೀಪರ್ ಶ್ರೀಜೇಶ್ಗೆ ವಿದಾಯ
ಒಲಿಂಪಿಕ್ಸ್ ಉದ್ದಕ್ಕೂ ಭಾರತಕ್ಕೆ ಗೆಲುವಿನಲ್ಲಿ ನೆರವಾಗಿದ್ದು ಗೋಲ್ ಕೀಪರ್ ಶ್ರೀಜೇಶ್. ಹೀಗಾಗಿ ಈ ಪದಕದೊಂದಿಗೆ ಅವರಿಗೆ ಉತ್ತಮ ವಿದಾಯ ದೊರಕಿದೆ. ಒಲಿಂಪಿಕ್ಸ್ ಆರಂಭಕ್ಕೆ ಮುನ್ನವೇ ಅವರು ಇದು ನನಗೆ ಕೊನೇ ಅಂತಾರಾಷ್ಟ್ರೀಯ ಟೂರ್ನಿ ಎಂದು ಹೇಳಿದ್ದರು. ಹೀಗಾಗಿ ಅವರು ಇಲ್ಲಿಗೆ ತಮ್ಮ ವೃತ್ತಿ ಕ್ರೀಡೆಯನ್ನು ಮುಗಿಸಲಿದ್ದಾರೆ. ಹೀಗಾಗಿ ತಂಡದ ಆಟಗಾರರು ಉತ್ತಮ ವಿದದಾಯ ಎಂದು ಹೇಳಲಾಗಿದೆ.
Advertisement