ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಪ್ರಕರಣದಿಂದ ಕೊಂಚ ಹಿನ್ನಡೆಯಾಗಿದ್ದ ಭಾರತಕ್ಕೆ ಇದೀಗ ಮತ್ತೊಂದು ಪದಕದ ಆಸೆ ಮೊಳಕೆಯೊಡೆದಿದ್ದು, ಪುರುಷರ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ (Aman Sehrawat ) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಹೌದು.. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಸೆಮಿಫೈನಲ್ ಪ್ರವೇಶಸಿದ್ದಾರೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21 ವರ್ಷದ ಅಮನ್ ಅವರು ಮಾಜಿ ವಿಶ್ವ ಚಾಂಪಿಯನ್ ಅಲ್ಬೇನಿಯಾದ ಜೆಲಿಮ್‌ಖಾನ್ ಅಬಕರೊವ್ (Zelimkhan Abkarov) ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಗಳಿಸಿದ್ದಾರೆ.
ಸೆಮಿಫೈನಲ್ ಮುಖಾಮುಖಿ ಇಂದು ರಾತ್ರಿ 9.45ಕ್ಕೆ (ಭಾರತೀಯ ಕಾಲಮಾನ) ನಡೆಯಲಿದ್ದು, ಅಗ್ರ ಶ್ರೇಯಾಂಕಿತ ಜಪಾನ್‌ನ ರೀ ಹಿಗುಚಿ ಸವಾಲನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು, ಮೊದಲ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಅಮನ್ ಅವರು ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಗೆಲುವು ದಾಖಲಿಸಿದ್ದರು. ಅಮನ್ ಸೆಹ್ರಾವತ್, ಪುರುಷರ ಕುಸ್ತಿ ವಿಭಾಗದಲ್ಲಿ ಭಾಗವಹಿಸುತ್ತಿರುವ ಭಾರತದ ಏಕಮಾತ್ರ ಸ್ಪರ್ಧಿ ಆಗಿದ್ದು, ಈಗ ಇನ್ನೊಂದು ಪಂದ್ಯ ಗೆದ್ದರೆ ಫೈನಲ್‌ಗೆ ಪ್ರವೇಶಿಸುವುದರೊಂದಿಗೆ ಪದಕ ಖಾತ್ರಿಪಡಿಸಲಿದ್ದಾರೆ.
Advertisement