
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಸ್ಪರ್ಧಿ ಅರ್ಷದ್ ನದೀಮ್ (Arshad Nadeem) ತಮ್ಮ ಪ್ರತಿಸ್ಪರ್ಧಿ ಭಾರತದ ನೀರಜ್ ಚೋಪ್ರಾ (Neeraj Chopra) ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಫೈನಲ್ ಪಂದ್ಯ ಮುಕ್ತಾಯದ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿ ಮಾತನಾಡಿದ ಅರ್ಷದ್ ನದೀಮ್, ಜಾವೆಲಿನ್ ಥ್ರೋ ಕ್ರೀಡೆ ಕೂಡ ಭಾರತ ಮತ್ತು ಪಾಕಿಸ್ತಾನದಲ್ಲಿ ಕ್ರಿಕೆಟ್ ನಷ್ಟೇ ಚರ್ಚೆಯಾಗುತ್ತಿದೆ. ಇದು ಸಂತಸದ ವಿಷಯವಾದರೂ ಆಟಗಾರರ ಮೇಲೆ ಒಂದಷ್ಟು ಒತ್ತಡ ಕೂಡ ಹೇರುತ್ತದೆ.
ಈ ಹಿಂದೆ ನದೀಮ್ ಮತ್ತು ನೀರಜ್ ಚೋಪ್ರಾ 11 ಬಾರಿ ಮುಖಾಮುಖಿಯಾಗಿದ್ದು 10ರಲ್ಲಿ ನೀರಜ್ ಚೋಪ್ರಾ ಮೇಲುಗೈ ಸಾಧಿಸಿದ್ದರು. ಆದರೆ ನಿನ್ನೆ 2ನೇ ಸ್ಥಾನಕ್ಕೆ ಕುಸಿದು ಮೊದಲ ಬಾರಿಗೆ ಅರ್ಷದ್ ನದೀಮ್ ವಿರುದ್ಧ ಹಿನ್ನಡೆ ಅನುಭವಿಸಿದರು.
ತಮ್ಮ ಮೊದಲ ಪ್ರಯತ್ನದಲ್ಲೇ ನದೀಮ್ ದಾಖಲೆಯ 92.97 ಮೀಟರ್ ದೂರಕ್ಕೆ ಭರ್ಜಿ ಎಸೆದರೆ, ನೀರಜ್ ಚೋಪ್ರಾ 89.45 ಮೀಟರ್ ದೂರ ಭರ್ಜಿ ಎಸೆದು 2ನೇ ಸ್ಥಾನ ಪಡೆದರು. ಆ ಮೂಲಕ ಬರೊಬ್ಬರಿ 35 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಒಲಿಂಪಿಕ್ಸ್ ನಲ್ಲಿ ಪದಕ ತಂದ 2ನೇ ಆಟಗಾರ ಎಂಬ ಕೀರ್ತಿಗೆ ನದೀಮ್ ಪಾತ್ರರಾಗಿದ್ದಾರೆ. ಈ ಹಿಂದೆ 1988 ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಹುಸೇನ್ ಷಾ ಕಂಚಿನ ಪದಕ ಗೆದ್ದಿದ್ದರು.
"Rivalry ಇದೆ ಆದರೆ..."
"ಕ್ರಿಕೆಟ್ ಪಂದ್ಯಗಳು ಮತ್ತು ಇತರ ಕ್ರೀಡೆಗಳಿಗೆ ಬಂದಾಗ ಪೈಪೋಟಿ ಇರುತ್ತದೆ, ಆದರೆ ಅದೇ ಸಮಯದಲ್ಲಿ, ಕ್ರೀಡೆಯನ್ನು ಅನುಸರಿಸುತ್ತಿರುವ ಎರಡೂ ದೇಶಗಳ ಯುವಕರು ನಮ್ಮನ್ನು ಅನುಸರಿಸುವುದು ಮತ್ತು ಅವರ ಕ್ರೀಡಾ ಐಕಾನ್‌ಗಳನ್ನು ಅನುಸರಿಸುವುದು ಮತ್ತು ಅವರ ದೇಶಕ್ಕಾಗಿ ಪ್ರಶಸ್ತಿಗಳನ್ನು ತರುವುದು ಒಳ್ಳೆಯದು ಎಂದು ಹೇಳಿದ್ದಾರೆ.
"ನಾನು ರಾಷ್ಟ್ರಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲರೂ ನನಗಾಗಿ ಪ್ರಾರ್ಥಿಸಿದರು, ಮತ್ತು ನಾನು ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೆ. ಈ ಹಿಂದೆ ನಾನು ಮೊಣಕಾಲು ಗಾಯದಿಂದ ಚೇತರಿಸಿಕೊಂಡಿದ್ದೆ. ನನ್ನ ಫಿಟ್ನೆಸ್ ಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಮುಂಬರುವ ದಿನಗಳು ಮತ್ತು ತಿಂಗಳುಗಳಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡುತ್ತೇನೆ. ಈ ಅಂಕವನ್ನು ಮೀರಿ ಎಸೆಯಲು ನಾನು ಯೋಜಿಸುತ್ತಿದ್ದೇನೆ ಎಂದು ಹೇಳಿದರು.
ಕ್ರಿಕೆಟಿಗನಾಗಬೇಕಾದವನು ಜಾವೆಲಿನ್ ಥ್ರೋಗೆ ಸೇರಿದೆ
ಇನ್ನು ನದೀಮ್ ಜಾವೆಲಿನ್ ಥ್ರೋಗೂ ಮುನ್ನ ಕ್ರಿಕೆಟಿಗರಾಗಿದ್ದರಂತೆ. ವೇಗದ ಬೌಲರ್ ಆಗಿದ್ದೆ. ಕ್ರಿಕೆಟ್ ಅಲ್ಲದೆ ಟೆನ್ನಿಸ್ ಕೂಡ ಆಡಿದ್ದೇನೆ. ಬಳಿಕ ಜಾವೆಲಿನ್ ಥ್ರೋ ಕ್ರೀಡೆ ಆರಂಬಿಸಿದೆ. ಕ್ರಮೇಣ ಆದೇ ನನ್ನ ವೃತ್ತಿಯಾಯಿತು ಎಂದು ಹೇಳಿಕೊಂಡಿದ್ದಾರೆ. ''ನಾನು ಕ್ರಿಕೆಟಿಗನಾಗಿದ್ದೆ, ನಾನು ಟೇಬಲ್ ಟೆನ್ನಿಸ್ ಆಡಿದ್ದೇನೆ ಮತ್ತು ನಾನು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸಹ ಭಾಗವಹಿಸಿದ್ದೇನೆ. ಆದರೆ ನನ್ನ ಕೋಚ್ ನನಗೆ ಜಾವೆಲಿನ್ ಥ್ರೋ ಆಡುವಂತೆ ಪ್ರೇರೇಪಿಸಿದರು. ಈ ಕ್ರೀಡೆಗೆ ಬೇಕಾದ ಉತ್ತಮ ಮೈಕಟ್ಟು ಹೊಂದಿದ್ದೇನೆ ಎಂದು ಹೇಳಿದರು. ನಾನು 2016 ರಿಂದ ಜಾವೆಲಿನ್ ಮೇಲೆ ಮಾತ್ರ ಗಮನಹರಿಸಿದ್ದೇನೆ" ಎಂದು ಅವರು ಹೇಳಿದರು.
"ನಾನು ಕೃಷಿ ಗ್ರಾಮದಿಂದ ಬಂದಿದ್ದೇನೆ ಮತ್ತು ಪ್ರತಿ ಬಾರಿ ನಾನು ಪದಕವನ್ನು ಗೆದ್ದಾಗ ನನ್ನ ಮೂಲದ ಬಗ್ಗೆ ಯೋಚಿಸುತ್ತೇನೆ ಮತ್ತು ಇದು ನನ್ನನ್ನು ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತದೆ. ಅದಕ್ಕಾಗಿಯೇ ನಾನು ವಿನಮ್ರನಾಗಿ ಉಳಿದಿದ್ದೇನೆ ಮತ್ತು ಅದಕ್ಕಾಗಿಯೇ ನಾನು ಹೆಚ್ಚು ಯಶಸ್ವಿಯಾಗಲು ಬಯಸುತ್ತೇನೆ. ಈ ಹಂತಕ್ಕೇರಲು ನಾನು ತುಂಬಾ ಕಠಿಣ ಸಮಯವನ್ನು ಎದುರಿಸಬೇಕಾಯಿತು" ಎಂದು ನದೀಮ್ ಹೇಳಿದ್ದಾರೆ.
ನೀರಜ್ ಮತ್ತು ನದೀಮ್ ಆಪ್ತ ಸ್ನೇಹಿತರು
ನದೀಮ್ ಮತ್ತು ನೀರಜ್ ಚೋಪ್ರಾ ಮೈದಾನದಲ್ಲಿ ತೀವ್ರ ಸ್ಪರ್ಧಿಗಳಾಗಿದ್ದರೂ, ಉತ್ತಮ ಸ್ನೇಹಿತರು. ಕೆಲವು ತಿಂಗಳ ಹಿಂದೆ, ಗುಣಮಟ್ಟದ ಜಾವೆಲಿನ್ ಖರೀದಿಸಲು ಹಣಕ್ಕಾಗಿ ನದೀಮ್ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದಾಗ, ನೀರಜ್ ಚೋಪ್ರಾ ತಮ್ಮ ಬೆಂಬಲವನ್ನು ನೀಡಲು ಮುಂದಾದವರಲ್ಲಿ ಮೊದಲಿಗರು.
Advertisement