
ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ Paralympics 2024 ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಬಂದಿದ್ದು, ಆರ್ಚರಿ ಮಿಶ್ರ ಡಬಲ್ಸ್ ನಲ್ಲಿ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಮತ್ತು ಬ್ಯಾಡ್ಮಿಂಟನ್ ನಲ್ಲಿ ಸುಹಾಸ್ ಯತಿರಾಜು ಪದಕ ಪಡೆದಿದ್ದಾರೆ.
ಆರ್ಚರಿ ಮಿಶ್ರ ಡಬಲ್ಸ್ ನಲ್ಲಿ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಕಂಚಿನ ಪದಕಕ್ಕೆ ಭಾಜನರಾದರೆ, ಬ್ಯಾಡ್ಮಿಂಟನ್ ನಲ್ಲಿ ಕನ್ನಡಿಗ ಯುಹಾಸ್ ಯತಿರಾಜು ಬೆಳ್ಳಿ ಪದಕ ಪಡೆದರು. ಫೈನಲ್ ಪಂದ್ಯದಲ್ಲಿ ಸುಹಾಸ್ ಫ್ರಾನ್ಸ್ ನ ಲ್ಯೂಕಾಸ್ ಮಜೂರ್ ವಿರುದ್ಧ 9-21, 13-21 ಸೆಟ್ ಗಳ ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು.
ಕನ್ನಡಿಗ ಸುಹಾಸ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಸತತ ಎರಡನೇ ಪದಕವಾಗಿದ್ದು, ಈ ಹಿಂದೆ 2020ರ ಪ್ಯಾರಾಲಿಂಪಿಕ್ಸ್‌ನಲ್ಲೂ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು 14ನೇ ಪದಕ ಮತ್ತು ಬ್ಯಾಡ್ಮಿಂಟನ್‌ನಲ್ಲಿ ನಾಲ್ಕನೇ ಪದಕವಾಗಿದೆ. ಸುಹಾಸ್‌ಗಿಂತ ಮೊದಲು ನಿತೀಶ್ ಕುಮಾರ್ ಎಸ್‌ಎಲ್ 3 ವಿಭಾಗದಲ್ಲಿ ಚಿನ್ನ ಗೆದ್ದಿದ್ದರೆ, ತುಳಸಿಮತಿ ಮುರುಗೇಶನ್ ಮತ್ತು ಮನೀಶಾ ರಾಮದಾಸ್ ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.
ಇನ್ನು ಆರ್ಚರಿ ಮಿಶ್ರ ಡಬಲ್ಸ್ ನಲ್ಲಿ ಭಾರತದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಜೋಡಿ ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಇಟಲಿಯ ಮ್ಯಾಟಿಯೊ ಬೊನಾಸಿನಾ ಮತ್ತು ಎಲಿಯೊನೊರಾ ಅವರನ್ನು 156-55 ಅಂತರದಿಂದ ಮಣಿಸಿ ಕಂಚಿನ ಪದಕಕ್ಕೆ ಭಾಜನರಾದರು.
ಈ ಮೂಲಕ ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಟರ್ಕಿ ನಿರ್ಮಿಸಿದ್ದ ಪ್ಯಾರಾಲಿಂಪಿಕ್ ದಾಖಲೆಯನ್ನೂ ಭಾರತ ಸರಿಗಟ್ಟಿದ್ದು, 2017 ರಲ್ಲಿ ಬೀಜಿಂಗ್‌ನಲ್ಲಿ ಮಾಡಿದ 158 ಸ್ಕೋರ್‌ನೊಂದಿಗೆ ಇಟಲಿ ವಿಶ್ವ ದಾಖಲೆಯನ್ನು ಹೊಂದಿದೆ.
14ಕ್ಕೇರಿದ ಪದಕಗಳ ಸಂಖ್ಯೆ
ಇನ್ನು ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3 ಚಿನ್ನ, 5 ಬೆಳ್ಳಿ ಮತ್ತು 6 ಕಂಚಿನ ಪದಕಗಳು ಸೇರಿವೆ.
Advertisement